ಇವರು ಶ್ರೀಮನ್ಮಾಧವತೀರ್ಥರ ತರುವಾಯ ಕಣ್ವಮಠದ ಪೀಠವನ್ನು ಅಲಂಕರಿಸಿದ ಯತೀಂದ್ರರು. ಶಾ.ಶ.೧೭೩೧ ಚೈತ್ರ ಶುಕ್ಲಪಕ್ಷ ತೃತೀಯಾದಿಂದ ಶಾ.ಶ.೧೭೩೩ ಭಾದ್ರಪದ ಕೃಷ್ಣಪಕ್ಷ ಚತುರ್ದಶಿಯವರೆಗೆ (ಅಂದರೆ ಕ್ರಿ.ಶ. ೧೮೦೯ ರಿಂದ ೧೮೧೧ ರವರೆಗೆ) ಅತ್ಯಲ್ಪ ಕಾಲವಷ್ಟೇ ವೇದಾಂತ ಸಾಮ್ರಾಜ್ಯವನ್ನು ಆಳಿದರು. ಇವರ ಮೂಲಸ್ಥಾನ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಿರೆಕೊಟ್ನಕಲ್ಲು. ಶಾ.ಶ.೧೭೩೩ (ಕ್ರಿ.ಶ.೧೮೧೧) ಪ್ರಜಾಪತಿನಾಮ ಸಂವತ್ಸರ ಭಾದ್ರಪದ ಶುಕ್ಲ ಚತುರ್ದಶಿ ದಿನ ಶ್ರೀ ವಿದ್ಯಾಧೀಶತೀರ್ಥರೆಂಬ ಮಹನೀಯರಿಗೆ ಯತ್ಯಾಶ್ರಮವನಿತ್ತು ಪೀಠವನ್ನು ವಹಿಸಿಕೊಟ್ಟು ತಾವು ತಾಳಿಕೋಟಿಯ ಪೂರ್ವಕ್ಕಿರುವ ಬಿಳಿಭಾವಿ ಎಂಬಲ್ಲಿ ವೃಂದಾವನಸ್ಥರಾದರು. ಶ್ರೀ ಅಕ್ಷೋಭ್ಯತೀರ್ಥರ ವೃಂದಾವನವು ನಯನ ಮನೋಹರವಾಗಿದ್ದು, ಭಕ್ತಾದಿಗಳ ಇಷ್ಟಾರ್ಥ ಪೂರ್ಣ ಮಾಡುವ ಕಲ್ಪತರುವಾಗಿದೆ.
ಶ್ರೀ ಅಕ್ಷೋಭ್ಯತೀರ್ಥರು ಕಣ್ವ ಮಠದ ಪರಮ ಶಿಷ್ಯರಾದ ದೇಸಾಯಿಯವರ ಸಹಾಯದಿಂದ ತಮ್ಮ ಗುರುಗಳ ಅಂದರೆ ಶ್ರೀಮನ್ಮಾಧವತೀರ್ಥರ ಸುಂದರ ವೃಂದಾವನವನ್ನು ಏರ್ಪಾಡು ಮಾಡಿದರು. ವೃಂದಾವನವು ಈಗಲೂ ಸಹ ನೋಡಲು ಅತ್ಯಂತ ರಮಣೀಯವಾಗಿದೆ.
ಶ್ರೀ ಅಕ್ಷೋಭ್ಯತೀರ್ಥರು ಬೃಂದಾವನಸ್ಥರಾದ ನಂತರ, ಒಂದು ದಿನ ಬೆಳಗಿನ ಜಾವದಲ್ಲಿ ಒಬ್ಬ ರೈತನು ರಂಟೆ ಹೊಡೆಯಲು ಹೊಲಕ್ಕೆ ಹೋಗುವಾಗ ಭಾವಿಯ ದಡದಲ್ಲಿ ಶ್ರೀಗಳು ಸ್ನಾನ ಮಾಡಿ ಶಾಟಿ ಹಿಂಡುತ್ತಿರುವುದನ್ನು ನೋಡಿದ. ಅದನ್ನರಿತ ಗುರುಗಳು ಶಾಟಿಯನ್ನು ಅಲ್ಲಿಯೇ ಬಿಟ್ಟು ಭಾವಿಯಲ್ಲಿ ಧುಮುಕಿದರಂತೆ. ರೈತ ರೋಮಾಂಚನಗೊಂಡು ಗುರುಗಳು ಹಿಂಡಿಟ್ಟ ಶಾಟಿಯನ್ನು ತಂದು ಊರಲ್ಲಿ ಎಲ್ಲರಿಗೂ ತೋರಿಸಲು, ಅದು ಗುರುಗಳ ಶಾಟಿಯೆಂದು ಮನನವಾಯಿತು. ಆ ರೈತನು ಶಾಟಿಯನ್ನು ದೇವರ ಕಟ್ಟೆಯ ಮೇಲಿಟ್ಟು ಪೂಜಿಸುತ್ತಿರುವುದಾಗಿ ಹಾಗೂ ಆತನಿಗೆ ಸಕಲ ಸೌಭಾಗ್ಯಗಳು ಲಭ್ಯವಾಗಿರುವುದಾಗಿ ಬಿಳೇಭಾವಿ ಜನರು ತಿಳಿಸುತ್ತಾರೆ.
೧೯೭೭ ರಲ್ಲಿ ಶ್ರೀ ವಿದ್ಯಾತಪೋನಿಧಿತೀರ್ಥ ಶ್ರೀಪಾದಂಗಳವರು ಚಾತುರ್ಮಾಸಕ್ಕೆ ಕುಳಿತಾಗ ಒಂದು ರಾತ್ರಿ ಅಕಸ್ಮಾತ್ತಾಗಿ ಅನಾರೋಗ್ಯ ಉಂಟಾಯಿತು. ಶ್ರೀಗಳವರು ತಮ್ಮ ಅವಸಾನ ಸಮೀಪಿಸಿತು ಎನ್ನುವಾಗ ಶ್ರೀ ಅಕ್ಷೋಭ್ಯತೀರ್ಥರು ಬಂದು "ಚಿಂತಿಸಬೇಡ, ಕೂಡಲೇ ಗುಣಮುಖನಾಗುವೆ" ಎಂದು ಹೇಳಿ, ಮೈದಡವಿ ಅದೃಶ್ಯರಾದರು. ನಂತರ ಶ್ರೀ ವಿದ್ಯತಪೋನಿಧಿತೀರ್ಥರಿಗೆ ಬೇಗನೆ ಗುಣಮುಖವಾಯಿತು.