Kanvamath
Home
Histroy
Parampare
Panchanga
Gallery
Downloads
Downloads
Branches
Aradhana/Current Events
List of Ekadashi
Contact Us
Other Website
Feedback
Home
ಶ್ರೀಕಣ್ವಮಠದ ಇತಿಹಾಸ

ಅದೊಂದು ಅಪೂರ್ವವಾದ ಸುವರ್ಣ ಸಂದರ್ಭ. ತಮ್ಮ ಮೂರನೆಯ ಅವತಾರದಲ್ಲಿ ಮಧ್ವಾಚಾರ್ಯರೆಂದು ಪ್ರಸಿದ್ಧಿ ಪಡೆದು ದ್ವೈತ ವೇದಾಂತ ಸಾಮ್ರಾಜ್ಯದ ಸಂಸ್ಥಾಪಕರಾಗಿ ಮೆರೆದವರು ಶ್ರೀವಾಯುದೇವರು. ಜಗತ್ತಿನಲ್ಲಿದ್ದ ಇಪ್ಪತ್ತೊಂದು ಮತಗಳನ್ನು ಖಂಡಿಸಿ, ಧೂಳೀಪಟವನ್ನಾಗಿಸಿ ಇಪ್ಪತ್ತೆರಡನೇ ಮತವಾದ ದ್ವೈತಮತವನ್ನು ಪ್ರಚುರಪಡಿಸಿದವರು ಶ್ರೀಮಧ್ವಾಚಾರ್ಯರು. ಇಂತಹ ಶ್ರೀಮಧ್ವಾಚಾರ್ಯರು ತಮ್ಮಲ್ಲಿ ಅಭ್ಯಾಸ ಮಾಡುತ್ತಿದ್ದ ಶಿಷ್ಯರನೇಕರಿಗೆ ಯತ್ಯಾಶ್ರಮವನ್ನು ಪ್ರದಾನ ಮಾಡಿ, ನಿರಂತರ ತತ್ವಜ್ಞಾನ ಪ್ರಸಾರಕ್ಕಾಗಿ ಅಣಿಗೋಳಿಸಿದರು. ಅಂತಹ ಶಿಷ್ಯಕೋಟಿಯಲ್ಲಿ ಪ್ರಮುಖರಾದವರು ಶ್ರೀಪದ್ಮನಾಭತೀರ್ಥರು ಹಾಗೂ ಉಡುಪಿಯ ಅಷ್ಟಮಠದ ಯತಿವರೇಣ್ಯರು. ಈ ಅಷ್ಟಮಠದಲ್ಲಿ ಸೇರಿದ ಶ್ರೀಶಿರೂರುಮಠದ ಮೂಲ ಯತಿಗಳು ಶ್ರೀಮಧ್ವಾಚಾರ್ಯರ ಕರಕಮಲ ಸಂಜಾತರಾದ ಶ್ರೀವಾಮನತೀರ್ಥರು. ಇಂತಹ ವಾಮನತೀರ್ಥರ ಯತಿ ಪರಂಪರೆಯಲ್ಲಿ ಬಂದ ಶ್ರೀ ಲಕ್ಷ್ಮೀಮನೋಹರತೀರ್ಥ ಶ್ರೀಪಾದರಿಂದ ಸಂನ್ಯಾಸವನ್ನು ಸ್ವೀಕರಿಸಿ ಶ್ರೀಮಾಧವತೀರ್ಥರಿಂದ ಬೆಳೆದು ಬಂದ ಮಠವೇ "ಶ್ರೀಕಣ್ವಮಠ".

ಇಂತಹ ಕಣ್ವಮಠದ ಸಂಸ್ಥಾಪಕರೇ ಮಾಧವತೀರ್ಥರು. ಶ್ರೀ ಮಾಧವತೀರ್ಥರ ವಾಸಸ್ಥಳ ಗುಲಬರ್ಗಾ ಜಿಲ್ಲೆಯ ಸುರಪುರವೆಂಬ ಗ್ರಾಮ. ಶ್ರೀಮಾಧವತೀರ್ಥರ ಪೂರ್ವಾಶ್ರಮದ ಹೆಸರು "ಶ್ರೀವೇಂಕಟೇಶಾಚಾರ್ಯರು" ಎಂಬುದಾಗಿ. ಇವರು ಚಿಕ್ಕಂದಿನಿಂದಲೇ ಆದಿಶೇಷ ದೇವರ ಉಪಾಸನೆಯಿಂದ ಅವರ ವಿಶೇಷಾನುಗ್ರಹಕ್ಕೆ ಪಾತ್ರರಾದವರು. ಸದಾಚಾರ ಸಂಪನ್ನರೂ ಆದ ಇವರು ವೈದಿಕ ಧರ್ಮದಲ್ಲಿ ಆಸಕ್ತರು. ವೇದಾಂತಾದಿ ಶಾಸ್ತ್ರಪ್ರವೀಣರೂ, ದಯಾಳುನಿಧಿಗಳೂ, ವಿರಕ್ತ ಶಿಖಾಮಣಿಗಳೂ ಆಗಿ, ಅಧ್ಯಯನ, ಅಧ್ಯಾಪನ,ನಿರಂತರ ಭಗವಂತನ ಚಿಂತನೆಯಲ್ಲಿ ಕಾಲ ಕಳೆಯುವವರಾಗಿದ್ದರು. ಹೀಗೆಯೇ ಜೀವನ ಸಾಗಿರಲು ಒಂದು ದಿನ ಆಚಾರ್ಯರ ಉಪಾಸ್ಯ ದೈವನಾದ ಶ್ರೀಆದಿಶೇಷನು ಸ್ವಪ್ನದಲ್ಲಿ ದರ್ಶನ ನೀಡಿ " ಹೇ ಅಚಾರ್ಯನೇ! ಇನ್ನು ಕೆಲವೇ ದಿನಗಳಲ್ಲಿ ವಾಯ್ವಂಶ ಸಂಭೂತರಾದ ಶ್ರೀಮದಾನಂದತೀರ್ಥರ ಯತಿ ಪರಂಪರೆಯಲ್ಲಿ ಬಂದ ಮಹಾತಪಸ್ವಿಗಳ ದರ್ಶನವಾಗುವುದು. ಅವರಿಂದ ಅನುಗ್ರಹೀತನಾಗಿ ಶ್ರೀಮದಾಚಾರ್ಯರಿಂದ ಪ್ರಸಾರ ಮಾಡಲ್ಪಟ್ಟ ವಿಷ್ಣು ಸರ್ವೋತ್ತಮತ್ವದ ಪ್ರಸಾರಕಾರ್ಯವನ್ನು ಮುಂದುವರೆಸಿ ಶ್ರೀನಾರಾಯಣನ ಅನುಗ್ರಹಕ್ಕೆ ಪಾತ್ರನಾಗು" ಎಂದು ಆದೇಶ ನೀಡಿದರು.

ಈ ರೀತಿ ಸ್ವಪ್ನದರ್ಶನವಾದ ಕೆಲವೇ ದಿನಗಳಲ್ಲಿ ಶ್ರೀಮದಾಚಾರ್ಯರ ಸಾಕ್ಷಾತ್ ಶಿಷ್ಯ ಪರಂಪರೆಯಲ್ಲಿ ಬಂದ ಉಡುಪಿಯ ಅಷ್ಟಮಠಗಳಲ್ಲೊಂದಾದ ಶ್ರೀಶಿರೂರು ಮಠದ ಯತಿ ಪರಂಪರೆಯಲ್ಲಿ ಬಂದ ಇಪ್ಪತ್ತ್ಮೂರನೆಯ ಯತಿ ಶ್ರೇಷ್ಠರಾದ ಶ್ರೀಲಕ್ಷ್ಮೀಮನೋಹರತೀರ್ಥ ಶ್ರೀಪಾದಂಗಳವರು ಆಚಾರ್ಯರ ವಾಸಸ್ಥಳವಾದ ಸುರಪುರಕ್ಕೆ ಬಂದರು. ಶ್ರೀಗಳವರಿಗೂ ಸಹ ಆದಿಶೇಷನು ಸ್ವಪ್ನ ದರ್ಶನವನ್ನಿತ್ತು "ನಾಳೆ ನಿಮ್ಮಲ್ಲಿಗೆ ಬರುವ ನನ್ನ ಉಪಾಸಕರಾದ ಶಿಷ್ಯರೋರ್ವರಿಗೆ ತುರ್ಯಾಶ್ರಮವನ್ನು ನೀಡಿ ಉದ್ಧರಿಸಬೇಕು" ಎಂದು ಅಜ್ಞೆಯನ್ನಿತ್ತರು. ಮರುದಿನ ಶ್ರೀಪಾದಂಗಳವರು ದರ್ಶನಾಕಾಂಕ್ಷಿಗಳಾಗಿ ಬಂದ ಭಕ್ತರನ್ನುದ್ದೇಶಿಸಿ ತಮಗಾದ ಸ್ವಪ್ನ ವೃತ್ತಾಂತವನ್ನು ತಿಳಿಸಿದರು. ಇದನ್ನು ಆಲಿಸಿದ ಭಕ್ತ ಜನರೊಂದಿಗೆ ಆಶ್ಚರ್ಯಚಕಿತರಾಗಿ ವೇಂಕಟೇಶಾಚಾರ್ಯರು ತಮ್ಮ ಅನುಭವಕ್ಕೆ ಬಂದ ಸ್ವಪ್ನವನ್ನು ತಿಳಿಸಿದರು.

ಆಗ ಶ್ರೀಲಕ್ಷ್ಮೀಮನೋಹರತೀರ್ಥರು ವೆಂಕಟೇಶಾಚಾರ್ಯರ ತೇಜಸ್ಸನ್ನೂ, ಸದಾಚಾರಸಂಪನ್ನತೆಯನ್ನೂ, ವಿಷ್ಣುಭಕ್ತಿ ಪರಾಯಣತೆಯನ್ನೂ, ವಿದ್ವತ್ತನ್ನೂ ಕಂಡು ಕನಸಿನ ಮೂಲಕ ಆದ ಭಗವದಾಜ್ಞೆಯನ್ನು ನೆರವೇರಿಸಲು ಇವರೇ ಸರಿಯಾದ ವ್ಯಕ್ತಿಯೆಂದು ನಿಶ್ಚಯಿಸಿ, ಅವರಿಗೆ ಫಲ-ಮಂತ್ರಾಕ್ಷತೆಯನ್ನು ನೀಡಿ, ಸಂನ್ಯಾಸ ನೀಡುವುದಾಗಿ ಘೋಷಿಸಿದರು. ಅಷ್ಟೇ ಅಲ್ಲ! ಇಂತಹ ಮಹಾತ್ಕಾರ್ಯಕ್ಕೆ ಉಡುಪಿಯ ಶ್ರೀಕೃಷ್ಣನ ಸನ್ನಿಧಾನವೇ ಯೋಗ್ಯವೆಂದು ತಿಳಿಸಿ, ತಮ್ಮೊಂದಿಗೆ ವೆಂಕಟೇಶಾಚಾರ್ಯರನ್ನೂ, ಉಳಿದ ಭಕ್ತಾದಿಗಳನ್ನೂ ಕರೆದುಕೊಂಡು ಹೊರಟರು. ಉಡುಪಿಯನ್ನು ಸೇರಿದ ಶ್ರೀಲಕ್ಷ್ಮೀಮನೋಹರತೀರ್ಥ ಶ್ರೀಪಾದರು ಅಷ್ಟಮಠದ ಯತಿಗಳಿಂದ ಕೂಡಿದ ಸಭೆ ಸೇರಿಸಿ ಸುರಪುರದಲ್ಲಿ ತಮಗಾದ ಸ್ವಪ್ನ ವೃತ್ತಾಂತವನ್ನೂ, ಸುರಪುರದ ಬ್ರಾಹ್ಮಣ ಸಮೂಹದೊಂದಿಗೆ ಶ್ರೀವೆಂಕಟೇಶಾಚಾರ್ಯರನ್ನೂ ಉಡುಪಿಗೆ ಕರೆತಂದಿರುವ ವಿಷಯ ತಿಳಿಸಿ ಮಾಘ ಶುಕ್ಲ ಪಂಚಮಿಯಂದು ಸಂನ್ಯಾಸ ದೀಕ್ಷೆ ನೀಡುವುದಾಗಿ ಘೋಷಿಸಿದರು.

೧೭೯೬ ನೇ ಇಸ್ವಿ ನಳ ಸಂ|| ದ ಮಾಘ ಶುಕ್ಲ ಪಂಚಮಿಯಂದು ಶ್ರೀ ಕೃಷ್ಣನ ಸನ್ನಿಧಾನದಲ್ಲಿ ನೆರೆದ ಅಪಾರ ಜನಸಮೂಹದ ಸಮ್ಮುಖದಲ್ಲಿ ಶ್ರೀವೆಂಕಟೇಶಾಚಾರ್ಯರಿಗೆ ಪ್ರಣವಮಂತ್ರವನ್ನುಪದೇಶಿಸಿ "ಶ್ರೀಮಾಧವತೀರ್ಥ" ರೆಂದು ನಾಮಕರಣ ಮಾಡಿದರು.

ಶ್ರೀವಾಮನತೀರ್ಥ ಶ್ರೀಪಾದರಿಂದ ೨೩ ನೇ ಶ್ರೀಪಾದರು ಶ್ರೀಲಕ್ಷ್ಮೀಮನೋಹರತೀರ್ಥರು. ಸಾಕ್ಷಾತ್ ಇವರಿಂದ ಶ್ರೀಕಣ್ವಮಠದ ಮೂಲಸ್ಥಾಪಕರಾದ ಶ್ರೀಮಾಧವತೀರ್ಥರಿಗೆ ಆಶ್ರಮವು ದೊರೆಯಿತು.