ಶ್ರೀ ಮಾಧವತೀರ್ಥರಿಂದ ಶ್ರೀ ವಿದ್ಯಾಧೀಶತೀರ್ಥರು ಸಂನ್ಯಾಸ ತೆಗೆದುಕೊಳ್ಳುವವರೆಗೆ ಸುರಪುರದ ಅರಸು ಗೋಸಲ ವಂಶಾಧಿಪನಾದ ರಾಜಾ ಗಡ್ಡಿ ಪಿಡ್ಡನಾಯಕನಿಂದ ನಡೆಯುತ್ತಿತ್ತು. ಅರಸನಿಗೆ ಸುರಪುರದ ಚಿಕ್ಕ ಹನುಮಂತದೇವರ ಗುಡಿಯ ಅರ್ಚಕರಾದ ಭೀಮಾಚಾರ್ಯರಲ್ಲಿ ಅತ್ಯಂತ ಭಕ್ತಿ ಇತ್ತು. ಅರಸನಿಗೆ ವೃದ್ಧಾಪ್ಯ ಆವರಿಸಿದಾಗ ಮಠದ ನಿರ್ವಹಣೆಗಾಗಿ ಜಹಗೀರು ಕೊಡಲು ಏನು ಮಾಡುವುದು ಎಂಬುದಾಗಿ ಭೀಮಾಚಾರ್ಯರಲ್ಲಿ ಸಮಾಲೋಚನೆ ಮಾಡುತ್ತಾನೆ. ಭೀಮಾಚಾರ್ಯರ ಸಲಹೆಯಂತೆ ಹುಣಸಗಿ ಹೋಬಳಿಯ ೪೦ ಹಳ್ಳಿಗಳ ಸಮೇತ ಶ್ರೀ ಕಣ್ವ ಮಠಕ್ಕೆ ಜಹಗೀರು ಕೊಡಲು ರಾಜನು ಸಿದ್ಧನಾಗಿ, ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರನ್ನು ಬರಮಾಡಿಕೊಂಡು ಮೇನೆಯಲ್ಲಿ ರಾಜವೈಭವದಿಂದ ಕುಳ್ಳಿರಿಸಿ ವೇದ-ವಾದ್ಯ ಘೋಷಗಳೊಂದಿಗೆ ಸುವರ್ಣಾಭಿಷೇಕಗೈದು ಜಹಗೀರನ್ನು ಸಮರ್ಪಿಸಿ ಕೃತಾರ್ಥರಾಗುತ್ತಾನೆ. ಹೀಗೆ ಶ್ರೀ ಕಣ್ವಮಠಕ್ಕೆ ಅಪಾರ ಭೂಮಿ-ಸೀಮೆ, ರಾಜಗೌರವವನ್ನು ತಂದುಕೊಟ್ಟ ಮಹಾನ್ ವ್ಯಕ್ತಿಯೇ ಸುರಪುರದ ಶ್ರೀ ಭೀಮಾಚಾರ್ಯರು.
ಒಂದು ದಿನ ಶ್ರೀ ವಿದ್ಯಾಧೀಶತೀರ್ಥರು ಪಂಡಿತರ ಸಭೆಯಲ್ಲಿ ವಿರಾಜಮಾನರಾಗಿದ್ದು ವಾಕ್ಯಾರ್ಥ ಮಾಡುತ್ತಿದ್ದರು. ಆಗ ಪೂಜ್ಯ ಭೀಮಾಚಾರ್ಯರು ಬಂದು ಶ್ರೀಗಳವರಿಗೆ ಸಾಷ್ಟಾಂಗ ಪ್ರಮಾಣಗಳನ್ನು ಮಾಡಿ "ಧನ್ಯವಾಯಿತು ಜೀವ ಗುರುಸೇವೆಯಲ್ಲಿ ಕರುಣಿಸಬೇಕು." ಎಂದು ಸೆರಗೊಡ್ಡಿ ನಿಂತ ಪರಮ ಶಿಷ್ಯನನ್ನು ಕಂಡು ಶ್ರೀ ವಿದ್ಯಾಧೀಶತೀರ್ಥ ಮಹಾಸ್ವಾಮಿಗಳವರು "ಏನು ಬೇಕೋ ಅದನ್ನು ನಿಃಸ್ಸಂಕೋಚವಾಗಿ ಕೇಳಿ, ನಿನ್ನ ಅಪೇಕ್ಷೆಯನ್ನು ಈಡೇರಿಸುವಂತೆ ಶ್ರೀ ವಿಠ್ಠಲಕೃಷ್ಣನು ನಮಗೆ ಪ್ರೇರಣೆ ನೀಡಿದ್ದಾನೆ" ಎಂದು ಹೇಳಿದರು. ಆಗ ಸಭೆಯಲ್ಲಿ ನೆರೆದ ವೈದಿಕರು ತಮ್ಮತಮ್ಮಲ್ಲಿಯೇ ಪಿಸುಮಾತನ್ನಾಡಹತ್ತಿದರು. ಈ ಬ್ರಾಹ್ಮಣ ಏನೋ ಬಲವಾದ ಅಪೇಕ್ಷೆ ಇಟ್ಟುಕೊಂಡು ಬಂದಂತೆ ಕಾಣುತ್ತದೆ. ಬಂಗಾರ ಬೇಡುವನೋ, ಭೂಮಿಸೀಮೆಯನ್ನು ಬೇಡುವನೋ ಅಥವಾ ಮುತ್ತುರತ್ನಗಳನ್ನು ಬೇಡುವನೋ ಎಂದು ಸಂಕಟಪಡುತ್ತಿದ್ದರು.
ಆದರೆ, ಮಹಾತ್ಮರಾದ ಶ್ರೀ ಭೀಮಾಚಾರ್ಯರು ಅತ್ಯಂತ ವಿನಯದಿಂದ, ಸರ್ವೋತ್ತಮನಾದ ಶ್ರೀಹರಿಯನ್ನು ಭಜಿಸಿ, ಜೀವನ್ಮುಕ್ತನಾಗಲು ನನಗೆ ಮೋಕ್ಷಸಂನ್ಯಾಸವನ್ನು ನೀಡಿ ಉದ್ಧರಿಸು ಗುರುರಾಯ ಎಂದು ಹೇಳಿದ್ದನ್ನು ಕೇಳಿ ನೆರೆದ ಜನ ಬೆರಗಾದರು.
ನಂತರ ಶ್ರೀಗಳವರು ಶ್ರೀ ಭೀಮಾಚಾರ್ಯರಿಗೆ ಯತಿ ಆಶ್ರಮವನ್ನು ನೀಡಿ "ಶ್ರೀಕೃಷ್ಣದ್ವೈಪಾಯನತೀರ್ಥ" ಎಂಬ ನಾಮಾಭಿದಾನವನ್ನಿತ್ತರು. ಶ್ರೀ ಕೃಷ್ಣದ್ವೈಪಾಯನತೀರ್ಥರು ಸುರಪುರದಲ್ಲಿದ್ದು ದಿವ್ಯತಪಸ್ಸನ್ನು ಗೈದು ತುಂಬಾ ಜನ ನಾಸ್ತಿಕರನ್ನು ಆಸ್ತಿಕರನ್ನಾಗಿ ಮಾಡಿದರು. ಇವರು ಶಾ.ಶ.೧೭೫೫ ರ ಫಾಲ್ಗುಣ ಶುದ್ಧ ಪೌರ್ಣಿಮೆಯಂದು ಹರಿಪುರಕ್ಕೆ ತೆರಳಿದರು. ಇವರ ಭವ್ಯ ವೃಂದಾವನವು ಸುರಪುರದಲ್ಲಿದ್ದು ದರಬಾರದಿಂದ ಶಿಲಾಮಂಟಪ ರಚಿಸಲ್ಪಟ್ಟಿದೆ.