ಜೋಯಿಸ ಧರ್ಮಭಟ್ಟ ಎಂಬುದು ಇವರ ಪೂರ್ವಾಶ್ರಮ ನಾಮಧೇಯ. ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲೂಕಿನ ಕಂಚಗಾರ ಬಳಗಲ್ ಗ್ರಾಮದವರು. ಇವರು ಪೂರ್ವಾಶ್ರಮದಲ್ಲಿ ಮಾಧವತೀರ್ಥರಿಗೆ ವಿದ್ಯಾಗುರುಗಳಾಗಿದ್ದರು. ಇವರು ಜ್ಯೋತಿಷ್ಯದಲ್ಲಿ ಮಹಾ ಪಂಡಿತರಾಗಿದ್ದರು. ಇವರ ಜ್ಯೋತಿಷ್ಯದಲ್ಲಿನ ಅಗಾಧವಾದ ಪಾಂಡಿತ್ಯಕ್ಕೆ ಮೆಚ್ಚಿ ವಿಜಯನಗರ ಸಾಮ್ರಾಜ್ಯದ ದೊರೆಯಾದ ಪ್ರೌಢದೇವರಾಯನು ಕೆಲವು ಜ್ಯೋತಿಷ್ಯ ವೃತ್ತಿಯನ್ನು ಇವರಿಗೆ ಇನಾಮು ಹಾಕಿ ಕೊಟ್ಟಿದ್ದನು. ವೇದಶಾಸ್ತ್ರ ಪಾರಂಗತರಾಗಿದ್ದ ಇವರು ಪಾಠ ಪ್ರವಚನಕ್ಕೂ ಹೆಸರಾದವರು.
ಶ್ರೀ ಮಾಧವತೀರ್ಥರು ಮಧ್ವತತ್ವ ಪ್ರಸಾರ ಮಾಡಲು ಸಂಚಾರಾರ್ಥವಾಗಿ ಆದವಾನಿಗೆ ಆಗಮಿಸಿದಾಗ ಶ್ರೀ ಜೋಯಿಸಧರ್ಮಭಟ್ಟರು ಮೋಕ್ಷಾರ್ಥಿಗಳಾಗಿ ಸಂನ್ಯಾಸಾಶ್ರಮವನ್ನು ಸ್ವೀಕರಿಸುವ ತಮ್ಮ ಬಲವಾದ ಇಚ್ಛೆಯನ್ನು ವ್ಯಕ್ತಪಡಿಸಿದರು. ಆಗ ಶ್ರೀ ಮಾಧವತೀರ್ಥರು ಇವರಿಗೆ "ವಾಮನತೀರ್ಥ" ರೆಂಬ ನಾಮಾಭಿದಾನದಿಂದ ಸಂನ್ಯಾಸ ದೀಕ್ಷೆಯನ್ನು ಅನುಗ್ರಹಿಸಿದರು ಹಾಗೂ ತಮ್ಮ ತರುವಾಯ ತಮ್ಮ ಪೂರ್ವಾಶ್ರಮ ಆರಾಧ್ಯದೇವತೆಯಾದ ಆದಿಶೇಷನ ಮಹಿಮೆಯು ವಾಮನತೀರ್ಥರ ದ್ವಾರಾ ಪ್ರಕಟವಾಗುವಂತೆ ತಮ್ಮ ತಪಃಸತ್ವವನ್ನು ಅವರಿಗೆ ಧಾರೆಯೆರೆದರು.
ಶ್ರೀ ವಾಮನತೀರ್ಥರು ಯತ್ಯಾಶ್ರಮ ಸ್ವೀಕರಿಸಿದ ಕಾಲದಲ್ಲಿ ಮುಸಲ್ಮಾನರ ಪ್ರಾಬಲ್ಯ ಅತಿಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಮುಸಲ್ಮಾನರ ಕೇಂದ್ರಸ್ಥಾನದಂತಿರುವ ಆದವಾನಿಯಲ್ಲಿ ಧರ್ಮದಂಡವನ್ನು ಹಿಡಿದು, ಅಲ್ಲಿಯ ಮುಸಲ್ಮಾನ ದೊರೆಯ ವಿಷಯದಲ್ಲಿ ಪವಾಡ ತೋರಿಸಿ, ಧರ್ಮಾಂಧರಾದ ಮುಸಲ್ಮಾನರು ಹಿಂದೂ ಜನರ ಮೇಲೆಯೂ, ದೇವಾಲಯಗಳ ಮೇಲೆಯೂ ಮಾಡುತ್ತಿದ್ದ ಪೀಡೆಗಳನ್ನು ಪರಿಹರಿಸಿದರು.
ಆದವಾನಿ ಹಾಗೂ ಕರ್ನೂಲ ಸಂಸ್ಥಾನಗಳ ನವಾಬರಿಬ್ಬರೂ ಮುಸಲ್ಮಾನರೇ ಆಗಿದ್ದರೂ ರಾಜತೃಷ್ಣೆಗಾಗಿ ಪರಸ್ಪರ ದ್ವೇಷಿಸುತ್ತಿದ್ದರು. ಒಂದು ಸಲ ಕರ್ನೂಲ ನವಾಬನ ಪ್ರಾಬಲ್ಯ ಹೆಚ್ಚಾಗಿ ಆದವಾನಿಯ ನವಾಬನನ್ನು ಬಂಧಿಸಿ, ತನ್ನ ಕಾರಾಗ್ರಹದಲ್ಲಿ ಇರಿಸಿದನು. ಆಗ ಆದವಾನಿಯ ರಾಜಮಂತ್ರಿಯು ತಮ್ಮ ರಾಜಧಾನಿಯಲ್ಲಿದ್ದ ಶ್ರೀ ವಾಮನತೀರ್ಥ ಯತಿವರ್ಯರ ತಪಃಸಾಮರ್ಥ್ಯದಿಂದ ತಮ್ಮ ರಾಜ್ಯಕ್ಕೆ ಬಂದೊದಗಿದ್ದ ಸಂಕಟ ದೂರಾಗಬಹುದೆಂದು ಯೋಚಿಸಿ ಅವರಿಗೆ ಶರಣು ಬಂದನು ಹಾಗೂ ಅವರಲ್ಲಿ ತಮ್ಮ ಅರಸನನ್ನು ಕರ್ನೂಲಿನ ಅರಸನ ಬಂಧನದಿಂದ ಮುಕ್ತಗೊಳಿಸಬೇಕು ಎಂದು ಪ್ರಾರ್ಥಿಸಿಕೊಂಡನು. ಶ್ರೀ ವಾಮನತೀರ್ಥರಿಗೆ ಇಂತಹ ಲೌಕಿಕ ಕಾರ್ಯಾಡಂಬರದಲ್ಲಿ ಕೈಹಾಕಲು ಮನಸ್ಸಿಲ್ಲದಿದ್ದರೂ, ಈ ರಜಕಾರ್ಯಕ್ಕೆ ನೆರವಾದರೆ ಮುಸಲ್ಮಾನರಿಂದ ಹಿಂದೂಗಳಿಗಾಗುತ್ತಿದ್ದ ಬಾಧೆಯನ್ನು ಹೋಗಲಾಡಿಸಲು ಹಾಗೂ ದೇವಾಲಯಗಳನ್ನು ಅವರಿಂದ ರಕ್ಷಿಸಲು ಅನುಕೂಲವಾಗುವುದೆಂದು ವಿಚಾರಿಸಿ, ಈ ಲೋಕೋಪಕಾರದ ಉದ್ದೇಶವನ್ನು ಈಡೇರಿಸುವ ಸಲುವಾಗಿ ರಾಜ ಪರಿವಾರದ ಪ್ರಾರ್ಥನೆಯನ್ನು ಮನ್ನಿಸಿದರು.
ಅದರಂತೆ ಅವರು ಕರ್ನೂಲಿನಲ್ಲಿ ನೆಲೆಸಿ, ತುಂಗಭದ್ರಾ ನದಿಯ ದಡದಲ್ಲಿ ಶ್ರೀ ಸೂರ್ಯನಾರಾಯಣನನ್ನು ಕುರಿತು ತಪಸ್ಸನ್ನಾಚರಿಸಿದರು. ಅಲ್ಲಿಯ ಜನರೆಲ್ಲರಿಗೂ ಇವರ ಮಹಿಮೆ ತಿಳಿದು, ಇವರ ಆಶ್ರಮಕ್ಕೆ ಬಂದು, ಇವರ ಸೇವೆಯನ್ನು ಮಾಡಿ, ತಮ್ಮ ರೋಗ-ರುಜಿನಗಳನ್ನು ಕಳೆದುಕೊಂಡರು. ಅವರವರ ಸೇವಾಫಲವಾಗಿ ಕುರುಡರಿಗೆ ಕಣ್ಣುಗಳು, ಕಿವುಡರಿಗೆ ಕಿವಿಗಳು ಪ್ರಾಪ್ತವಾದವು. ವಾಸಿಯಾಗದ ರೋಗರುಜಿನಗಳೆಲ್ಲ ಪರಿಹಾರವಾದವು. ಹೀಗೆ ಶ್ರೀ ವಾಮನತೀರ್ಥರಿಂದ ಲೋಕ ಕಲ್ಯಾಣಕರ ಘಟನೆಗಳು ನಡೆಯುತ್ತಿರಲು, ಈ ವಾರ್ತೆಯು ಕರ್ನೂಲಿನ ನವಾಬನ ಕಿವಿಯವರೆಗೂ ತಲುಪಿತು. ನವಾಬನು ಈ ಸುದ್ದಿಯನ್ನು ಕೇಳಿ, ಗುರುಗಳನ್ನು ಪರೀಕ್ಷೆ ಮಾಡಬೇಕು ಎಂದುಕೊಂಡು ಅವರ ಬಳಿ ಬರಲು ನಿರ್ಧರಿಸಿದನು. ನವಾಬನು ಗುರುಗಳ ಬಳಿ ಬಂದು ಮೊದಮೊದಲು ಕುಶಲಪ್ರಶ್ನೆಗಳನ್ನು ಮಾಡಿ, ನಂತರ ಸ್ವಾಮಿಗಳ ತಪಸ್ಸಿನ ಉದ್ದೇಶವನ್ನು ಹಾಗೂ ತನ್ನ ರಾಜಧಾನಿಯಲ್ಲಿ ಬಂದು ನೆಲೆಸಿದ ಕಾರಣವನ್ನು ಕುರಿತು ಪ್ರಶ್ನೆ ಮಾಡಿದನು.
ಶ್ರೀ ವಾಮನತೀರ್ಥ ಯತಿಗಳಿಗೆ ತಮ್ಮ ಉತ್ತರದಿಂದ ನವಾಬನಿಗೆ ಕೋಪವುಂಟಾಗುವುದೆಂದು ತಿಳಿದಿದ್ದರೂ, ನಿಸ್ಸಂಕೋಚವಾಗಿ, ನಿರ್ಭೀತರಾಗಿ ಹೇಳಿದರು "ಹೇ ಬಾದಶಹನೇ, ನಿನ್ನ ರಾಜ್ಯ ವಿಸ್ತಾರವನ್ನು ಕಂಡು ನಮಗೆ ಅತ್ಯಂತ ಸಂತೋಷವೆನಿಸುತ್ತಿದೆ. ಆದರೆ ಇದಕ್ಕೆ ಶೋಭಿಸುವಂತೆ ಪರಧರ್ಮ ಸಹಿಷ್ಣುತೆ, ಪರೋತ್ಕರ್ಷೆಯ ಸಹನ ಗುಣ ನಿಮ್ಮಲ್ಲಿಲ್ಲ. ಇವುಗಳು ನಿಮ್ಮಲ್ಲಿ ಉದಯವಾಗಲಿ ಎಂಬ ಉದ್ದೇಶದಿಂದ ನಿಮ್ಮ ರಾಜಧಾನಿಗೆ ಬಂದು ನೆಲೆಸಿ ತಪವನ್ನಾಚರಿಸುತ್ತಿರುವೆನು. ಆದವಾನಿ ನವಾಬರೂ, ನೀವು ಒಂದೆ ಧರ್ಮದವರಾಗಿದ್ದು, ಬಂಧುಗಳಂತಿರುವವರು. ಹೀಗಿದ್ದರೂ ಅವರ ಉತ್ಕರ್ಷೆಯನ್ನು ಸಹಿಸದೆ ಅವರನ್ನು ಸೆರೆಹಿಡಿದು, ಕಾರಾಗೃಹದಲ್ಲಿ ಇಟ್ಟಿರುವಿರಿ. ಇದರಿಂದ ನಿಮಗೆ ಕಲ್ಯಾಣವಾಗಲಾರದು. ಕೂಡಲೆ ಅವರನ್ನು ಬಿಡುಗಡೆಗೊಳಿಸಿ, ಪರಧರ್ಮದವರನ್ನು ಮಕ್ಕಳೋಪಾದಿಯಲ್ಲಿ ಕಾಪಾಡಿರಿ." ಎಂದು ಪರಸ್ಪರ ಐಕ್ಯಭಾವವು ಬೆಳೆಯುವಂತೆ ಮಾತನಾಡಿದರು. ಬಾದಶಹನಿಗೆ ಈ ಮಾತುಗಳನ್ನು ಸಹಿಸಲಿಕ್ಕಾಗದೇ, ರಾಜಸತ್ತೆಯ ಮದದಿಂದ ಅವನು "ಸ್ವಾಮಿಗಳೇ, ತಾವು ಯತಿಗಳು. ವಿರಕ್ತ ಶಿಖಾಮಣಿಗಳು, ನೀವು ನಿಮ್ಮ ಧರ್ಮದಲ್ಲಿ ಕೈಹಾಕಿ ಮಾತನಾಡಬೇಕಲ್ಲದೆ ಇಂತಹ ರಾಜಕಾರಣದಲ್ಲಿ ಕೈಹಾಕುವ ಗೋಜಿಗೆ ಹೋಗಬಾರದು. ನೀವು ಇನ್ನು ನಮ್ಮ ರಾಜ್ಯದ ಹಾದು ಬಿಟ್ಟು ಹೊರಗೆ ಹೋಗಬೇಕು. ಇಲ್ಲವಾದರೆ ಬಲವಂತದಿಂದ ಗಡೀಪಾರು ಮಾಡಬೇಕಾದೀತು!" ಎಂದು ಕಟ್ಟಪ್ಪಣೆ ಮಾಡಿ ಹಿಂದಿರುಗಿದನು. ರಾಜಪರಿವಾರದವರೆಲ್ಲರೂ ಬಹಳ ಖೇದಪಡತೊಡಗಿದರು.
ನವಾಬನ ಈ ದರ್ಪೋಕ್ತಿಯಿಂದ ವಾಮನತೀರ್ಥರಿಗೇನೂ ಅಸಮಧಾನವಾಗಲಿಲ್ಲ. ಸಕಲವೂ ಭಗವಂತನ ಲೀಲೆಯೆಂದು ಸುಮ್ಮನೆ ಕುಳಿತುಬಿಟ್ಟರು.
ಆದರೆ, ನವಾಬನು ಶ್ರೀವಾಮನತೀರ್ಥರ ಆಶ್ರಮದಿಂದ ಹೊರಡುವುದೊಂದೇ ತಡ, ತುಸು ಹೊತ್ತಿನಲ್ಲಿ ಹೊರಗಿನಿಂದ ಕಾವಲುಗಾರರು ಓಡುತ್ತ ಬಂದು "ಹುಜೂರ, ಬಂಧನದಲ್ಲಿದ್ದ ಅದವಾನಿ ನವಾಬರ ಕಾರಾಗೃಹದ ಕೀಲಿಗಳು ಒಮ್ಮಿಂದೊಮ್ಮೆಲೇ ತಾವೇ ಕಳಚಿಬಿದ್ದಿವೆ. ಒಳಗೊಂದು ಘಟಸರ್ಪವು ಹೆಡೆತೆಗೆದು ಭುಸುಗುಡುತ್ತಿರುವುದು. ರಾಜವಾಡೆಯಲ್ಲಿ ಅಶುಭ ಶಕುನಗಳು ತೋರಹತ್ತಿವೆ." ಎಂದು ಕೈಮುಗಿದು ನವಾಬನಿಗೆ ಬಿನ್ನವಿಸಿಕೊಂಡರು.
ಈ ಅಶುಭವಾರ್ತೆಯನ್ನು ಕೇಳಿದೊಡನೆ ನವಾಬನಿಗೆ, ತನ್ನ ಅಪರಾಧದ ಅರಿವಾಗಿ, ರಾಜಮದವನ್ನು ಬಿಟ್ಟು, ಶ್ರೀವಾಮನತೀರ್ಥ ಯತಿಗಳ ಆಶ್ರಮಕ್ಕೆ ಧಾವಿಸಿದನು. ಶ್ರೀ ವಾಮನತೀರ್ಥ ಸ್ವಾಮಿಗಳ ಪಾದಕ್ಕೆ ಎರಗಿ ದೈನ್ಯದಿಂದ ವಿಜ್ಞಾಪಿಸಿಕೊಂಡನು. ತನ್ನಿಂದಾದ ಅಪರಾಧವನ್ನು ಮನ್ನಿಸಬೇಕೆಂದು ಪ್ರಾರ್ಥಿಸಿಕೊಂಡನು. ರಾಜವಾಡೆಯಲ್ಲಿ ಅಶುಭ ಘಟನೆಗಳು ನಡೆಯುತ್ತಿವೆ. ಈ ವಿಪತ್ತಿನಿಂದ ರಕ್ಷಿಸಬೇಕು ಎಂದು ಪ್ರಾರ್ಥಿಸಿಕೊಂಡನು. ಆಗ ಯತಿವರೇಣ್ಯರು "ಬಾದಶಹನೇ, ನಿಷ್ಕಾರಣವಾಗಿ ಅನ್ಯರನ್ನು ಹಿಂಸಿಸಿದರೆ ಭಗವಂತ ಸುಮ್ಮನೆ ಬಿಡುವುದಿಲ್ಲ. ಈ ಕೂಡಲೇ ನಿಮ್ಮ ಮತದವರೇ ಆದ ಆದವಾನಿಯ ನವಾಬನನ್ನು ಬಿಡುಗಡೆ ಮಾಡಿ ರಾಜಮರ್ಯಾದೆಯಿಂದ ಕಳಿಸಿಕೊಡಿ. ಇನ್ನು ಮುಂದೆ ಪರಸ್ಪರ ಬಂಧುಗಳಂತೆ ವರ್ತಿಸಿರಿ. ಹಿಂದೂ ಪ್ರಜೆಗಳ ಮೇಲೆ ಯಾವ ಅನ್ಯಾಯ ಎಸಗದಿರಿ, ಹಿಂದೂ ದೇವಾಲಯಗಳನ್ನು ಸಂರಕ್ಷಿಸಿರಿ. ನಿಮಗೆ ಇನ್ನು ಯಾವ ಭಯವೂ ಇಲ್ಲ." ಎಂದು ಅಭಯವನ್ನು ನೀಡಿ ಬಾದಶಹನನ್ನು ಕಳಿಸಿದರು.
ಅದರಂತೆ ನವಾಬನು ಅರಮನೆಗೆ ಬಂದಾಗ ಯಾವ ಅಹಿತಕರ ಘಟನೆಗಳು ನಡೆದಿರಲಿಲ್ಲ. ಆದವಾನಿಯ ನವಾಬನನ್ನು ಬಂಧಮುಕ್ತಗೊಳಿಸಿ, ಇನ್ನು ಮುಂದೆ ಸಹೋದರರಂತೆ ಬಾಳೋಣ ಎಂದು ಹೇಳಿ, ರಾಜಮರ್ಯಾದೆಯಿಂದ ಬೀಳ್ಕೊಟ್ಟನು.
ಹೀಗೆ, ಶ್ರೀ ವಾಮನತೀರ್ಥರು ಆದವಾನಿ ಹಾಗೂ ಕರ್ನೂಲ ನವಾಬರಲ್ಲಿ ಸ್ನೇಹ ಹುಟ್ಟಿಸಿದರು. ಇದರಿಂದ ಇಬ್ಬರೂ ನವಾಬರೂ ಶ್ರೀ ವಾಮನತೀರ್ಥರನ್ನು ಭಕ್ತಿಯಿಂದ ಸೇವಿಸತೊಡಗಿದರು. ಆದವಾನಿಯ ನವಾಬನು ಗುರುಗಳ ಆಜ್ಞೆಯಂತೆ ಹಿಂದೂ ಪ್ರಜೆಗಳಿಗೆ ಪೀಡೆಯಾಗದಂತೆ ನೋಡಿಕೊಂಡನು. ಹಿಂದೂ ದೇವಾಲಯಗಳ ಬಗ್ಗೆ ಗೌರವಾದರಗಳನ್ನು ತೋರಿದನು. ತನ್ನ ಆದಾಯದ ಕೆಲವು ಭಾಗವನ್ನು ಶ್ರೀ ವಾಮನತೀರ್ಥರ ಸೇವೆಗೆ ಸಲ್ಲುವಂತೆ ಶಾಸನ ಮಾಡಿದನು.
ಗುರುಗಳ ಅಪ್ಪಣೆಯ ಮೇರೆಗೆ ಆದವಾನಿಯ ನವಾಬನು ಆದವಾನಿಯ ಭಂಡಾರಗಲ್ಲು ಎಂಬ ಸ್ಥಳದಲ್ಲಿ ಅವರ ವೃಂದಾವನದ ಸಕಲ ಏರ್ಪಾಡುಗಳನ್ನು ಮಾಡಿದನು.
ಶ್ರೀ ವಾಮನತೀರ್ಥರು ಆಷಾಢ ಪೌರ್ಣಮಿಯಂದು ಹರಿಪದವನ್ನು ಸೇರಿದರು. ಪ್ರತಿವರ್ಷವೂ ಭಂಡಾರಗಲ್ಲು ಎಂಬಲ್ಲಿ ವಿಜೃಂಭಣೆಯಿಂದ ಅವರ ಆರಾಧನಾ ಮಹೋತ್ಸವವು ಜರುಗುತ್ತದೆ.