ಶ್ರೀವಿದ್ಯಾಭೂಷಣತೀರ್ಥಂ ವಂದೇ ಕಾಣ್ವ ಮಠಾಧಿಪಂ |
ಭಾಗವತ ಶಿರೋಮಣಿಂ ಚ ಶ್ರೀ ವಿಠ್ಠಲಕೃಷ್ಣ ಪೂಜಕಂ ||
ಇವರ ಪೂರ್ವಾಶ್ರಮ ನಾಮ ಕೃಷ್ಣಾಚಾರ್ಯ ಜೋಶಿ. ಕೌಶಿಕ ಗೋತ್ರೋತ್ಪನ್ನರು. ವೈದಿಕ ಮನೆತನದ ಶ್ರೀ ತಿಮ್ಮಣ್ಣಾಚಾರ್ಯ ಜೋಶಿ ಹಾಗೂ ಶ್ರೀಮತಿ ಕಮಲಾಬಾಯಿ ಎಂಬ ದಂಪತಿಗಳಿಗೆ ದ್ವಿತೀಯ ಪುತ್ರರಾಗಿ ಶಾ.ಶ. ೧೮೩೮ ನಳನಾಮ ಸಂವತ್ಸರ ಕಾರ್ತೀಕ ಕೃಷ್ಣ ಪಕ್ಷ ದ್ವಾದಶಿ ಕ್ರಿ.ಶ. ೫-೧೦-೧೯೧೬ ರಂದು ಜನಿಸಿದರು. ಎಂಟನೇಯ ವರ್ಷದಲ್ಲಿ ಕೆಲವಡಿ ರಂಗನಾಥನ ಸನ್ನಿಧಿಯಲ್ಲಿ ಉಪನಯನ ಸಂಸ್ಕಾರವಾಯಿತು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಸ್ವಂತ ಊರಾದ ಹೂಲಗೇರಿಯಲ್ಲಿ ಮುಗಿಸಿ, ಮನೆತನದ ವಿದ್ಯೆಯಾದ ವೈದಿಕ ವಿದ್ಯೆಯನ್ನು ಕಲಿಯಲು ಪಂಡಿತರ ತವರೂರಾದ ಕೃಷ್ಣಾತೀರದ ಗಲಗಲಿ ಎಂಬ ಗ್ರಾಮಕ್ಕೆ ಬಂದರು. ಅಲ್ಲಿ ವೇ.ಮೂ.ವೆಂಕಣ್ಣಭಟ್ಟ ಜೋಶಿ ಎಂಬ ವಿದ್ವಾಂಸರ ಬಳಿ ಶುಕ್ಲ ಯಜುರ್ವೇದ, ಮುಹೂರ್ತ ಮಾರ್ತಾಂಡ, ವೈದಿಕ ಕರ್ಮಗಳ ಪ್ರಯೋಗ, ಸಂಸ್ಕೃತ ಇತ್ಯಾದಿ ಅಭ್ಯಾಸ ಮಾಡಿದರು. ಹೆಚ್ಚಿನ ಸಂಸ್ಕೃತ ಭಾಷಾ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ಬಂದು, ಅಲ್ಲಿಯ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ವ್ಯಾಕರಣ, ಕಾವ್ಯ, ನಾಟಕ ಇತ್ಯಾದಿ ವಿಷಯಗಳನ್ನು ಆಳವಾಗಿ ಅಭ್ಯಾಸ ಮಾಡಿದರು. ಪುಣೆಯ ವೇದಶಾಸ್ತ್ರೋತೇಜಕ ಸಭೆಯಿಂದ ನಡೆಸಲಾದ "ವ್ಯುತ್ಪತ್ತಿ" ಪರೀಕ್ಷೆಯಲ್ಲಿ ಧಾರವಾಡದಿಂದ ಕುಳಿತಿದ್ದ ವಿದ್ಯಾರ್ಥಿಗಳಲ್ಲಿ ಇವರೊಬ್ಬರು ಮಾತ್ರ ಉತ್ತೀರ್ಣರಾಗಿ ಪ್ರಮಾಣಪತ್ರ ಪಡೆದುಕೊಂಡು ಬಂದರು. ಇನ್ನಷ್ಟು ಮುಂದಿನ ಅಧ್ಯಯನಕ್ಕಾಗಿ ಮೈಸೂರಿಗೆ ತೆರಳಿದರು. ಅಲ್ಲಿನ ಮಹಾರಾಜಾ ಸಂಸ್ಕೃತ ಪಾಠಶಾಲೆಯಲ್ಲಿ ಐದು ವರ್ಷಗಳವರೆಗೆ ಕಠಿಣವಾದ ನ್ಯಾಯಶಾಸ್ತ್ರವನ್ನು ಅಭ್ಯಾಸ ಮಾಡಿದರು. ಬಡತನ ಎಲ್ಲ ಕಡೆ ಇವರನ್ನು ಬೆನ್ನಟ್ಟಿಕೊಂಡು ಬಂದಿತ್ತು. ಊಟಕ್ಕಾಗಿ ವಾರಕ್ಕೊಂದು ಮನೆ ಗೊತ್ತು ಮಾಡಿಕೊಂಡು, ಕೆಲವೊಂದು ಸಲ ಮಧುಕರಿ ವೃತ್ತಿಯಿಂದ ಜೀವನ ಕಳೆದರು. ಓದುವುದಕ್ಕೆ ಒಂದು ದೀಪದ ಸೌಕರ್ಯವನ್ನು ಒದಗಿಸಿಕೊಳ್ಳುವುದಕ್ಕೂ ಕಷ್ಟವಾಗಿದ್ದು, ಬೀದಿ ದೀಪದ ಬೆಳಕಿನಲ್ಲಿ ಅಧ್ಯಯನ ಸಾಗಿಸಿದರು. ಇಂತಹ ಕಠಿಣ ಪ್ರಸಂಗಗಳಲ್ಲೂ ಧೈರ್ಯಗುಂದದೆ ತಮ್ಮ ಅಧ್ಯಯನ ಮುಂದುವರೆಸಿ ಪರೀಕ್ಷೆಗಳಲ್ಲಿ ಯಾವಗಲೂ ಪ್ರಥಮ, ದ್ವಿತೀಯ ಸ್ಥಾನಗಳನ್ನೇ ಗಳಿಸಿದರು. ಮೈಸೂರಿನ "ನ್ಯಾಯ ವಿದ್ವತ್" ಪರೀಕ್ಷೆಯಲ್ಲಿ ಪ್ರಥಮರಾಗಿ ಉತ್ತೀರ್ಣರಾಗಿ ಸುವರ್ಣ ಪದಕದೊಂದಿಗೆ "ನ್ಯಾಯ ವಿದ್ವಾನ್" ಪದವೀಧರರಾದರು. ಮೈಸೂರಿನಲ್ಲಿ ಇರುವಾಗ ಕನ್ನಡ ಹಾಗೂ ಹಿಂದಿ ಭಾಷೆಗಳನ್ನೂ ಕೂಡ ಅಭ್ಯಸಿಸಿದರು. ಮದ್ರಾಸಿನ ಕನ್ನಡ ವಿದ್ವಾನ್ ಪರೀಕ್ಷೆ ಹಾಗೂ ಮದ್ರಾಸಿನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯು ನಡೆಸುವ "ರಾಷ್ಟ್ರ ಭಾಷಾ" ಹಾಗೂ "ವಿಶಾರದ" ಎಂಬ ಹಿಂದಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಬಡತನ ಇನ್ನೂ ಕೂಡ ಅವರ ಬೆನ್ನು ಬಿಟ್ಟಿರಲಿಲ್ಲ. ಆದರೂ ಅದನ್ನು ಲೆಕ್ಕಿಸದೆ ಹಣಕ್ಕಾಗಿ ಬೇರೆಯವರ ಸಹಾಯ ಪಡೆದು ಬರೋಡಾಕ್ಕೆ ಹೋಗಿ "ನ್ಯಾಯ ಶಿರೋಮಣಿ" ಎಂಬ ಪರೀಕ್ಷೆಗೆ ಕುಳಿತು ಅದರಲ್ಲೂ ಉತ್ತೀರ್ಣರಾದರು.ಅಲ್ಲಿಂದ ಹಿಂದಿರುಗಿ ಬಂದು ಮದ್ರಾಸಿನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ "ಮೀಮಾಂಸಾ ಶಿರೋಮಣಿ" ಪದವಿ ಪರೀಕ್ಷೆಯ ಪ್ರಥಮ ವರ್ಷ ಮಾತ್ರ ಅಧ್ಯಯನಗೈದರು. ಕಾರಣಾಂತರದಿಂದ ಓದನ್ನು ಅಲ್ಲಿಗೆ ನಿಲ್ಲಿಸಿ, ಜೀವನ ನಿರ್ವಹಣೆಗಾಗಿ ನೌಕರಿ ಅನ್ವೇಷಣೆಯಲ್ಲಿ ಹೊರಟು ಬಾಗಲಕೋಟೆಯ ಶಂಕ್ರಪ್ಪ ಸಕ್ರಿ ಹೈಸ್ಕೂಲಿನಲ್ಲಿ ೧೯೪೩ ರಲ್ಲಿ ಅಧ್ಯಾಪಕ ವೃತ್ತಿಯನ್ನು ಕೈಗೊಂಡರು.
ನೌಕರಿಗೆ ಸೇರಿದ ಮರುವರ್ಷವೇ ಗ್ರಹಸ್ಥ ಜೀವನ ಪ್ರಾರಂಭವಾಯಿತು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಲಕಲ್ಲ ಗ್ರಾಮದ ಪಂಡಿತರ ಮನೆತನದವರಾದ ವೇ.ಕೋಡೀಹಾಳ ರಂಗಾಚಾರ್ಯ ಎಂಬುವರ ಮಗಳಾದ ಕಮಲಾ ಎಂಬ ಕನ್ಯೆಯೊಡನೆ ವಿವಾಹವಾಯಿತು. ಪತಿಯ ಧಾರ್ಮಿಕ ಪ್ರವೃತ್ತಿಗೆ ಅತ್ಯಂತ ಅನುಕೂಲಳಾದ ಸತಿ, ಪತಿಭಕ್ತಿ ಪರಾಯಣೆ. ಹೀಗಾಗಿ ಆಚಾರ್ಯರ ಅಧ್ಯಾತ್ಮ ಚಿಂತನೆಗೆ ಇನ್ನಷ್ಟು ಪ್ರೋತ್ಸಾಹ ದೊರಕಿತು. ಶ್ರೀಮನ್ಮಧ್ವಾಚಾರ್ಯರ ಬೃಹತ್ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿ, ಮಧ್ವಶಾಸ್ತ್ರ ಪಾರಂಗತರಾದರು. ತಮ್ಮ ಕಟ್ಟು ನಿಟ್ಟಾದ ವೇದವಿಹಿತಾಚರಣೆಯಿಂದ ಮಹಾಕರ್ಮಠರೆನಿಸಿದರು. ಇವರಿಗೆ ೪ ಜನ ಗಂಡುಮಕ್ಕಳು. ಎಲ್ಲರನ್ನು ಚೆನ್ನಾಗಿ ಓದಿಸಿ, ಸುಸಂಸ್ಕೃತರನ್ನಾಗಿ ಮಾಡಿದರು. ಮೂವತ್ತೆರಡು ವರ್ಷಗಳ ಕಾಲ ಅಮೋಘ ಸೇವೆ ಸಲ್ಲಿಸಿ, ೧೯೭೫ ಏಪ್ರಿಲಿನಲ್ಲಿ ಅಧ್ಯಾಪಕ ವೃತ್ತಿಯಿಂದ ನಿವೃತ್ತಿ ಹೊಂದಿದರು. ಈ ಅವಧಿಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದರು. ಹತ್ತು ಹಾಗೂ ಹನ್ನೊಂದನೆಯ ತರಗತಿಯ ವಿದ್ಯಾರ್ಥಿಗಳಿಗಾಗಿ "ಕನ್ನಡ ಭಾಷಾ ದರ್ಶನ" ಎಂಬ ವ್ಯಾಕರಣ ಪುಸ್ತಕ ಹಾಗೂ ಬಿ.ಎ. ತರಗತಿಯ ವಿದ್ಯಾರ್ಥಿಗಳಿಗಾಗಿ "ಚಂಪೂ ಗ್ರಂಥಗಳು" ಎಂಬ ಪುಸ್ತಕವನ್ನು ಬರೆದರು.
ಶ್ರೀ ಕಣ್ವ ಮಠದ ಆಸ್ಥಾನ ಪಂಡಿತರಾಗಿದ್ದರು. ಅನೇಕ ಸಂಘ ಸಂಸ್ಥೆಗಳನ್ನು ಕಟ್ಟಿ ಕಣ್ವ ಶಾಖೀಯರ ಉದ್ಧಾರಕ್ಕಾಗಿ ಶ್ರಮಿಸಿದರು.
ಅಧ್ಯಾಪಕ ವೃತ್ತಿಯಿಂದ ನಿವೃತ್ತಿ ಹೊಂದಿದ ಮೇಲೆ ಪಾಠ-ಪ್ರವಚನಗಳಲ್ಲಿ ಕಾರ್ಯನಿರತರಾದರು. ಕೆಲದಿನಗಳ ನಂತರ ಅವರು ಬೆಂಗಳೂರಿಗೆ ಬಂದು, ಮಕ್ಕಳ ಜೊತೆ ಕಾಲ ಕಳೆಯಲು ಪ್ರಾರಂಭಿಸಿದರು. ಬೆಂಗಳೂರಿನ ರಾಯರ ಮಠಗಳಲ್ಲಿ ಹಾಗೂ ಮಾಧ್ವ ಸಂಘದಲ್ಲಿ ಪ್ರವಚನ , ಮಧ್ವಶಾಸ್ತ್ರ ಅಧ್ಯಾಪನ ಕಾರ್ಯ ನಡೆಸಿದರು. ಬೆಂಗಳೂರಿನ ಮಲ್ಲೇಶ್ವರಂ ಬಡಾವಣೆಯಲ್ಲಿರುವ ರಾಘವೇಂದ್ರಾಶ್ರಮದ ಸಂಚಾಲಕರಾದ ಶ್ರೀಯುತ ಬಿ.ಎನ್.ವಾಸುದೇವರಾಯರು ತಮ್ಮ ಮಧ್ವಶಾಸ್ತ್ರ ಗ್ರಂಥ ಪ್ರಕಾಶನ ಮಾಲಿಕೆಯಿಂದ ಇವರಿಂದ ಕನ್ನಡಕ್ಕೆ ಅನುವಾದಿತವಾದ ಹನ್ನೊಂದು ಗ್ರಂಥಗಳನ್ನು ಪ್ರಕಟಪಡಿಸಿದರು. ಗೀತಾಭಾಷ್ಯ ಹಾಗೂ ಗೀತಾತಾತ್ಪರ್ಯಗಳ ಕನ್ನಡ ಅನುವಾದವನ್ನು ಶ್ರೀ ಉತ್ತರಾದಿಮಠಾಧೀಶರಾಗಿದ್ದ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರು ಹಾಗೂ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಮೊದಲಾದ ಮಹಾ ಪ್ರಭೃತಿಗಳು ಮುಕ್ತಕಂಠದಿಂದ ಪ್ರಶಂಸೆ ಮಾಡಿರುವರು. ೧೯೮೨ ರಲ್ಲಿ ರಾಘವೇಂದ್ರಾಶ್ರಮ ಸಂಸ್ಥೆಯವರು ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಿಂದ "ವಿದ್ವನ್ಮಣಿ" ಎಂಬ ಬಿರುದನ್ನು ಪ್ರದಾನ ಮಾಡಿಸಿ, ಸನ್ಮಾನ ಮಾಡಿದರು.
ಹೀಗೆ ಭಗವಂತನ ಸೇವೆಯಲ್ಲಿ ಕಾಲಕ್ಷೇಪ ಮಾಡುತ್ತಿರಲು ಒಂದು ದಿನ ಕಣ್ವ ಮಠದಿಂದ ಕರೆ ಬಂದಿತು. ಶಾ.ಶ. ೧೯೧೦ ವಿಭವನಾಮ ಸಂವತ್ಸರ ಚೈತ್ರ ಮಾಸ ಕೃಷ್ಣ ಪಕ್ಷ ದ್ವಿತೀಯಾ, ಸೋಮವಾರ ದಿನಾಂಕ ೪-೪-೧೯೮೮ ರಂದು ಶ್ರೀ ವಿದ್ಯಾತಪೋನಿಧಿತೀರ್ಥರು ಸಂನ್ಯಾಸ ದೀಕ್ಷೆ ಕೊಟ್ಟು, "ವಿದ್ಯಾಭೂಷಣತೀರ್ಥ" ರೆಂಬ ನಾಮಾಭಿದಾನದಿಂದ ಕಣ್ವ ಮಠದ ಪಾಠದಲ್ಲಿ ವಿರಾಜಮಾನರನ್ನಾಗಿ ಮಾಡಿದರು.
ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷಿಕ್ತರಾಗಿ, ವ್ಯಾಪಕವಾಗಿ ಸಂಚಾರಗೈದು ಕಣ್ವ ಮಠದ ಕೀರ್ತಿ ಪತಾಕೆಯನ್ನು ದಿಗಂತದಲ್ಲಿ ಹಾರಿಸಿದರು. ಶ್ರೀ ಮಧ್ವಾಚಾರ್ಯರ ದ್ವೈತ ಸಿದ್ಧಾಂತವನ್ನು ಎಲ್ಲೆಡೆ ಪ್ರಚಾರ ಮಾಡಿದರು.
ಶಿಷ್ಯರ ಉದ್ಧಾರಕ್ಕಾಗಿ ರಾಯಚೂರು, ಲಿಂಗಸೂಗೂರು, ಸುರಪುರ. ಆದವಾನಿ, ಬಳ್ಳಾರಿ, ಹೊಸಪೇಟೆ, ಗಂಗಾವತಿ, ಬಾಗಲಕೋಟೆ, ಬಿಜಾಪುರ, ಮುದ್ದೆಬಿಹಾಳ, ಸೊಲ್ಲಾಪುರ, ಪಂಢರಪೂರ, ಪುಣೆ, ನಾಸಿಕ, ಹೈದ್ರಾಬಾದ ಮುಂತಾದ ಅನೇಕ ಹಳ್ಳಿ-ಪಟ್ಟಣಗಳಲ್ಲಿ ಸಂಚಾರಗೈದು ದ್ವೈತ ಸಿದ್ಧಾಂತವನ್ನು ಬೋಧಿಸಿದರು. ಮಠದ ಮೂಲಸ್ಥಾನವಾದ ಹುಣಸಿಹೊಳೆಯಲ್ಲಿ ಮಠದ ಕಟ್ಟಡದ ಜೀರ್ಣೋದ್ಧಾರ ಮಾಡಿದರು.