ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಕವಿತಾಳ ಎಂಬ ಗ್ರಾಮವು ಇವರ ಮೂಲಸ್ಥಾನ. ಭಾರದ್ವಾಜ ಗೋತ್ರೋತ್ಪನ್ನರು. ಇವರ ಪೂರ್ವಾಶ್ರಮದ ಹೆಸರು ಶ್ರೀನಿವಾಸಾಚಾರ್ಯ. ತಂದೆ ಹೆಸರು ರಾಘವೇಂದ್ರಾಚಾರ್ಯ. ಇವರದು ದಾಸರ ಮನೆತನ. ಶಾ.ಶ.೧೮೧೦(ಕ್ರಿ.ಶ. ೧೮೮೮) ರಲ್ಲಿ ಇವರು ಪೀಠಾರೋಹಣ ಮಾಡಿದರು. ಕಣ್ವ ಮಠದ ಯತಿಪರಂಪರೆಯಲ್ಲಿ ಇವರು ಮಾತ್ರ ಬ್ರಹ್ಮಚರ್ಯ ಆಶ್ರಮದಲ್ಲಿ ಪೀಠಾರೋಹಣ ಮಾಡಿದವರು. ಇವರು ತೇಜೋವಂತರು, ಮಹಾತಪಸ್ವಿಗಳೂ ಆಗಿದ್ದರು. ಹರಿ, ಗುರುಗಳ ಭಕ್ತಿ, ಶಾಂತ ಸ್ವಭಾವದಿಂದ ಪರಿಪೂರ್ಣರಾಗಿದ್ದರು. ತಮ್ಮ ಗುರುಗಳಾದ ವಿದ್ಯಾಸಂಪೂರ್ಣತೀರ್ಥರಂತೆಯೇ ದಿಗ್ವಿಜಯ ಯಾತ್ರೆ ಕೈಗೊಂಡು ಅನೇಕ ಕಡೆಗಳಲ್ಲಿ ಮಧ್ವ ತತ್ವವನ್ನು ಪ್ರಚಾರ ಮಾಡಿದ ಮಹಾನುಭಾವರು. ಮುಳಬಾಗಿಲು, ಕೋಲಾರ, ಬೆಂಗಳೂರು ಮುಂತಾದ ಕಡೆಯಿಂದ ಶ್ರೀಗಳವರ ದರ್ಶನಕ್ಕಾಗಿ, ಅವರ ನೆಲೆಯನ್ನು ಹುಡುಕುತ್ತ ಸುರಪುರಕ್ಕೆ ಬಂದರು. ಆಗ ಸುರಪುರದ ಮುಜುಂದಾರರಾದ ಲಿಂಗಪ್ಪನವರ ಎಂಬ ಗೃಹಸ್ಥರು, ಬಂದ ಎಲ್ಲ ಶಿಷ್ಯರನ್ನು ಆದರೋಪಚಾರ ಮಾಡಿ, ಹುಣಸಿಹೊಳೆ ವೀರಘಟ್ಟಕ್ಕೆ ಕರೆದೊಯ್ದು ಶ್ರೀಗಳವರ ದರ್ಶನ ಮಾಡಿಸಿದರು. ಈ ಶಿಷ್ಯವರ್ಗದ ಆಗ್ರಹದ ಮೇರೆಗೆ ಬೆಂಗಳೂರು, ಕೋಲಾರ, ಮುಳಬಾಗಿಲು ಕಡೆಗಳಲ್ಲಿ ಶ್ರೀಗಳವರು ಸಂಚಾರ ಮಾಡಿದರು. ಸಂಚಾರ ಮುಗಿಸಿ ಪುನಃ ವೀರಘಟ್ಟಕ್ಕೆ ಶ್ರೀಗಳವರು ಹಿಂದಿರುಗಿದರು. ಶಾ.ಶ.೧೮೪೧ (ಕ್ರಿ.ಶ. ೧೯೧೯) ಸಿದ್ಧಾರ್ಥಿನಾಮ ಸಂವತ್ಸರ ಆಶ್ವೀಜ ಅಮವಾಸ್ಯೆ ದಿನ ಶ್ರೀ ವಿದ್ಯಾವಿರಾಜತೀರ್ಥರೆಂಬುವರಿಗೆ ಆಶ್ರಮವನ್ನು ಕೊಟ್ಟು, ಶ್ರೀಮಠದ ಮೂಲಸ್ಥಾನವಾದ ಹುಣಸಿಹೊಳೆಯಲ್ಲಿ ಶಾ.ಶ. ೧೮೪೧ (ಕ್ರಿ.ಶ. ೧೯೧೯) ರಲ್ಲಿ ವೃಂದಾವನಸ್ಥರಾದರು.