ಕಮಲಾಪುರದಲ್ಲಿ ಶ್ರೀ ಕಣ್ವ ಮಠದ ಜಮೀನುಗಳು ಇದ್ದುದರಿಂದಲೂ ಹಾಗೂ ಮಠದ ಅನೇಕ ಶ್ರೀಮಂತ ಶಿಷ್ಯರು ಇದ್ದುದರಿಂದಲೂ ಶ್ರೀ ವಿದ್ಯಾವಿರಾಜತೀರ್ಥರು ಕಮಲಾಪುರದಲ್ಲಿ ಬಿಡಾರ ಮಾಡಿದ್ದರು. ಒಂದು ರಾತ್ರಿ ದೇಸಾಯಿಯವರ ಮನೆಯಲ್ಲಿ ಶ್ರೀ ವಿಠ್ಠಲಕೃಷ್ಣ ದೇವರಿಗೆ ಮಂಗಳಾರತಿಯಾಯಿತು, ಮಾಲಿಕಾ ಮಾಡಬೇಕಾಗಿತ್ತು. ಮಂತ್ರಪುಷ್ಪ ಹೇಳುವ ಬ್ರಾಹ್ಮಣರ ಸಮೂಹದಲ್ಲಿ ರಾಯಚೂರು ಜಿಲ್ಲೆಯ ದಾಸ ಸಾಹಿತ್ಯ ದಿಗ್ಗಜ ವೇ.ಶಾ.ಸಂ.ದಾಮೋದರಾಚಾರ್ಯ ಎಂಬ ಮಹನೀಯರೊಬ್ಬರಿದ್ದರು. ಎಲ್ಲ ಶಿಷ್ಯರು ಮಾಲಿಕ ಮಾಡಲು ಮುನ್ನುಗ್ಗಲು ಶ್ರೀಗಳವರು ದಾಮೋದರಾಚಾರ್ಯರರನ್ನು ಮಾಲಿಕಾ ಮಾಡಲು ಕರೆದರು. ಆದರೆ ಅವರ ಹತ್ತಿರ ಮಾಲಿಕಾ ತಟ್ಟೆಯಲ್ಲಿ ಹಾಕಲು ಹಣ ಇರಲಿಲ್ಲ. ಗುರುವಾಜ್ಞೆಯನ್ನು ಮೀರುವಂತಿರಲಿಲ್ಲ. ಆದ ಕಾರಣ ತಮ್ಮ ಕೈಯಲ್ಲಿದ್ದ ವಜ್ರಖಚಿತವಾದ ಬಂಗಾರದ ಉಂಗುರವನ್ನು ಹಾಕಿದರು. ಇದನ್ನು ಕಂಡ ಶ್ರೀಗಳವರು, ದಾಮೋದರಾಚಾರ್ಯರ ದಾನ, ಧರ್ಮ, ತ್ಯಾಗಗಳನ್ನು ನೋಡಿ ಅವರಿಗೆ ತಮ್ಮ ಉತ್ತರಾಧಿಕಾರಿಯಾಗಬೇಕು ಎಂದು ತಿಳಿಸಿದರು.
ಆಗ ದಾಮೋದರಾಚಾರ್ಯರು ವಿನಯದಿಂದ ಕರಮುಗಿದು, ಶಿರಬಾಗಿ "ಸ್ವಾಮಿ, ನಾನು ಆಶ್ರಮ ತೆಗೆದುಕೊಳ್ಳಲು ಅಸಮರ್ಥನಿದ್ದೇನೆ. ಆದ ಕಾರಣ ಬೇರೆ ಯಾರಾದರೂ ಸಮರ್ಥರೂ, ಯೋಗ್ಯರೂ ಆದ ಪಂಡಿತರಿಗೆ ಆಶ್ರಮ ಕೊಡಬೇಕು." ಎಂದು ಪ್ರಾರ್ಥಿಸಿಕೊಂಡರು. ಆಗ ಶ್ರೀಗಳವರು "ಸಂಕಲ್ಪ ಮಾತ್ರ ನಮ್ಮದು. ಭಗವದನುಗ್ರಹ ನಿಮ್ಮ ಮೇಲೆ ಇದೆ. ಚಿಂತಿಸಬೇಡಿ." ಎಂದು ತಿಳಿಸಿದರು.
ಅದರ ಪ್ರಕಾರ, ದಾಮೋದರಾಚಾರ್ಯರು ಶಾ.ಶ.೧೮೬೯ (ಕ್ರಿ.ಶ.೧೯೪೭) ಸರ್ವಜಿತ್ ನಾಮ ಸಂವತ್ಸರ ಭಾದ್ರಪದ ಶುದ್ಧ ದಶಮಿಯಂದು ಯತ್ಯಾಶ್ರಮ ಸ್ವೀಕರಿಸಿ, ಶ್ರೀ ವಿದ್ಯಾಮನೋಹರತೀರ್ಥರೆಂಬ ಪರಿವ್ರಾಜಕ ಸುನಾಮದಿಂದ ಶ್ರೀ ಕಣ್ವಮಠದ ಪೀಠವನ್ನು ಅಲಂಕರಿಸಿದರು. ಮರುದಿನ ಏಕಾದಶಿ ದಿನ ಶ್ರೀ ವಿದ್ಯಾವಿರಾಜತೀರ್ಥರು ಹರಿಪದವನ್ನು ಸೇರಿದರು. ಶ್ರೀ ವಿದ್ಯಾಮನೋಹರತೀರ್ಥರು ತಮ್ಮ ಗುರುಗಳ ವೃಂದಾವನವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ಶ್ರೀ ವಿದ್ಯಾಮನೋಹರತೀರ್ಥರಿಗೆ ಮಠದ ಆಸ್ತಿ-ಪಾಸ್ತಿಗಳ ಬಗ್ಗೆ ವಿವರ ಸಿಕ್ಕಿರಲಿಲ್ಲ. ಆದರೂ ಅವರು ಧೃತಿಗೆಡದೆ ಎತ್ತಿನ ಗಾಡಿಯಲ್ಲಿ ಸಂಚಾರ ಮಾಡಿ ಧರ್ಮ ಪ್ರಸಾರ ಕಾರ್ಯ ಮಾಡಿದರು. ಏಷ್ಟೇ ಬವಣೆ, ಕಷ್ಟ ಇದ್ದರೂ ಪ್ರತಿದಿನವೂ ಶ್ರೀ ವಿಠ್ಠಲಕೃಷ್ಣದೇವರಿಗೆ ಕರಿಗೆಡಬಿನ ನೈವೇದ್ಯ ಮಾಡುತ್ತಿದ್ದರು.
ಶಾ.ಶ. ೧೮೮೯ (ಕ್ರಿ.ಶ. ೨೯-೬-೧೯೬೭) ಪ್ಲವಂಗನಾಮ ಸಂವತ್ಸರ ಜ್ಯೇಷ್ಠ ಬಹುಳ ಸಪ್ತಮಿಯಂದು ವಿಜಾಪುರ ಜಿಲ್ಲೆಯವರಾದ ವೇ. ರಂಗಭಟ್ಟ ಜೀವನಭಟ್ಟ ಜೋಷಿ ಅವರಿಗೆ ಶ್ವೇತಶೃಂಗಿಯಲ್ಲಿ ಆಶ್ರಮವಿತ್ತು, ಶ್ರೀ ವಿದ್ಯಾತಪೋನಿಧಿತೀರ್ಥರೆಂದು ಸುನಾಮವಿತ್ತು, ಕಣ್ವ ಪೀಠದಲ್ಲಿ ಪಟ್ಟಾಭಿಷಿಕ್ತರನ್ನಾಗಿ ಮಾಡಿದರು.
ಶ್ರೀ ವಿದ್ಯಾಮನೋಹರತೀರ್ಥರು ಶಾ.ಶ. ೧೮೯೦ (ಕ್ರಿ.ಶ. ೧೬-೬-೧೯೬೮) ಜ್ಯೇಷ್ಠ ಬಹುಳ ಷಷ್ಠಿಯಂದು ಬೃಂದಾವನಸ್ಥರಾದರು. ಇವರ ಬೃಂದಾವನ ಹುಣಸಿಹೊಳೆಯಲ್ಲಿ ಇದೆ.