ಶ್ರೀಮದ್ವಿದ್ಯಾಧೀಶತೀರ್ಥ ಕರಕಮಲ ಸಂಜಾತರಾದ ಶ್ರೀ ವಿದ್ಯಾನಿಧಿತೀರ್ಥರು ಶಾ.ಶ. ೧೭೭೦ (ಕ್ರಿ.ಶ. ೧೮೪೮) ಕೀಲಕನಾಮ ಸಂವತ್ಸರ ಆಷಾಢ ಕೃಷ್ಣಪಕ್ಷ ದ್ವಿತೀಯಾ ದಿನ ಶ್ರೀಮಠದ ಪೀಠಾರೋಹಣ ಮಾಡಿದರು. ವೆಂಕಟೇಶಾಚಾರ್ಯ ಎಂಬುದು ಇವರ ಪೂರ್ವಾಶ್ರಮದ ನಾಮಧೇಯ. ಇವರ ಊರು ಬಿಜಾಪುರ ಜಿಲ್ಲೆಯ ಬಾಗಲಕೋಟೆ. ಜಹಗೀರದಾರ ಮನೆತನದವರು. ಕೌಶಿಕ ಗೋತ್ರೋತ್ಪನ್ನರು. ವೈದಿಕದಲ್ಲಿ ಬಹಳ ನಿಷ್ಣಾತರು. ಸಂಚಾರ ಕ್ರಮೇಣ ಸುರಪುರಕ್ಕೆ ಆಗಮಿಸಿದಾಗ ಸುರಪುರದ ಅರಸನು ಸಕಲ ರಾಜಮರ್ಯಾದೆಗಳೊಂದಿಗೆ ಆನೆಯ ಮೇಲೆ ಮೆರವಣಿಗೆ ಮಾಡಿ ಸ್ವಾಗತ ಮಾಡಿದನು. ಇವರು ಒಳ್ಳೆಯ ತಪಸ್ವಿಗಳು, ಮಹಾಯೋಗಿಗಳು, ಅಗಾಧ ಮಹಿಮಾಶಾಲಿಗಳು. ಕೃಷ್ಣಾ, ತುಂಗಭದ್ರಾ ನದೀ ತೀರ ಪ್ರದೇಶಗಳಲ್ಲಿ ಸಂಚರಿಸಿ, ಮಠಕ್ಕೆ ಅನೇಕ ಮಂದಿ ಶಿಷ್ಯರನ್ನು ಸಂಪಾದಿಸಿದರು. ಮಠವು ಇವರ ಪ್ರಭಾವದಿಂದಾಗಿ ಒಳ್ಳೆ ಘನತೆಯನ್ನು ಪಡೆಯಿತು. ಶಾ.ಶ. ೧೭೮೮ (ಕ್ರಿ.ಶ. ೧೮೬೬) ಅಕ್ಷಯನಾಮ ಸಂವತ್ಸರ ಫಾಲ್ಗುಣ ಕೃಷ್ಣಪಕ್ಷ ಷಷ್ಠಿ ದಿನ ಶ್ರೀ ವಿದ್ಯಾಸಂಪೂರ್ಣತೀರ್ಥರೆಂಬುವರಿಗೆ ಆಶ್ರಮವಿತ್ತು ಮಠದಾಡಳಿತವನ್ನೊಪ್ಪಿಸಿ ವೃಂದಾವನಸ್ಥರಾದರು.
ಇವರ ವೃಂದಾವನವು ತಾಳೀಕೋಟೆಯ ಹತ್ತಿರ ಬಿಳಿಭಾವಿ ಎಂಬಲ್ಲಿ ಇದೆ. ಶ್ರೀವೆಂಕಟೇಶ, ಕೃಷ್ಣದಾಸ ಮೊದಲಾದ ಅನೇಕ ಭಕ್ತರು ಇವರ ಮೇಲೆ ಸುಂದರವಾದ ಕೀರ್ತನೆಗಳನ್ನು ರಚಿಸಿರುವರು.
ಬಿಳಿಭಾವಿಯಲ್ಲಿ ತಮ್ಮ ಪರಮಗುರುಗಳಾದ ಶ್ರೀ ಅಕ್ಷೋಭ್ಯತೀರ್ಥರ ವೃಂದಾವನದ ಎಡಭಾಗದಲ್ಲಿ ಇವರ ವೃಂದಾವನವಿರುತ್ತದೆ. ಇವರ ವೃಂದಾವನವನ್ನು ಪ್ರತಿಷ್ಠಾಪಿಸಲ್ಪಟ್ಟ ನಂತರ ಬೆನ್ನಲ್ಲಿ ಒಂದು ಹರಳು ನೆಟ್ಟಿತಂತೆ. ಅವರು ಬಿಳಿಭಾವಿ ಕುಲಕರ್ಣಿಯವರ ತಾಯಿ ಸ್ವಪ್ನದಲ್ಲಿ ದರುಷನವಿತ್ತು ತಮ್ಮ ಬೆನ್ನಿನಲ್ಲಿ ಹರಳು ನೆಟ್ಟಿದ್ದು, ಹಿಂದಿನಿಂದ ನೆಲವನ್ನು ಅಗೆದು ಹರಳು ತೆಗೆದು ಮತ್ತೆ ವೃಂದಾವನಕ್ಕೆ ಪ್ರೋಕ್ಷಣೆ ಮಾಡುವಂತೆ ಆಜ್ಞಾಪಿಸಿದರಂತೆ. ಅವರ ಅಪ್ಪಣೆಯಂತೆ ತಾಳಿಕೋಟೆಯ ವೈದಿಕ ವೃಂದವು ಕಾರ್ಯತತ್ಪರರಾಗಿ ನೋಡಲು ಹರಳು ಬೆನ್ನಿನ್ನಲ್ಲಿ ನೆಟ್ಟಿತಂತೆ. ಅದನ್ನು ತೆಗೆದು ಸರಿಪಡಿಸಿ ವೃಂದಾವನಕ್ಕೆ ಪ್ರೋಕ್ಷಣೆ ಮಾಡಲಾಯಿತಂತೆ.