ಕನಕಗಿರಿ ಹನುಮಂತಾಚಾರ್ಯ ಎಂಬುದು ಇವರ ಪೂರ್ವಾಶ್ರಮದ ನಾಮಧೇಯ. ಕಾಶ್ಯಪ ಗೋತ್ರೋತ್ಪನ್ನರಾದ ಕನಕಗಿರಿಯ ಗುರುರಾಜಾಚಾರ್ಯರ ಜೇಷ್ಠ ಪುತ್ರರು. ಇವರ ಊರು ಗುಲಬರ್ಗಾ ಜಿಲ್ಲೆಯ ಸುರಪುರ. ಇವರು ಮಹಾಧರ್ಮಿಷ್ಠರು, ಸದಾಚಾರ ಸಂಪನ್ನರು. ಇವರು ಒಳ್ಳೆಯ ಸಂಸ್ಕೃತ ವಿದ್ವಾಂಸರೂ ಆಗಿದ್ದರು. ವೈದಿಕ ವಿದ್ಯಾಭ್ಯಾಸದಲ್ಲಿ ಪರಿಣತೆಯನ್ನು ಹೊಂದಿದ್ದರು ಹಾಗೂ ವೈದಿಕ ವೃತ್ತಿಯನ್ನೇ ಅವಲಂಬಿಸಿ ಜೀವನವನ್ನು ಸಾಗಿಸುತ್ತಿದ್ದರು. ಒಮ್ಮೆ ಇವರು ಬಿಜಾಪುರ ಜಿಲ್ಲೆಯ ಪ್ರಸಿದ್ಧ ಕಲ್ಲಿನ ಖಣಿ ಎಂದೆನಿಸಿದ ಶೆಲ್ಲಿಕೇರಿ ಎಂಬ ಗ್ರಾಮಕ್ಕೆ ಹೋದಾಗ ಹಳ್ಳದಲ್ಲಿ ಮುಖ ಮಾರ್ಜನೆ ಮಾಡಲು ವರ್ತಿಯನ್ನು ತೆಗೆಯಲು, ಅಲ್ಲಿ ಅವರಿಗೆ ಒಂದು ಚಿಕ್ಕ ಆಂಜನೇಯ ಮೂರ್ತಿಯೊಂದು ದೊರಕಿತು. ಅದನ್ನು ನಿತ್ಯ ಪೂಜಿಸಬೇಕೆಂಬ ದೃಷ್ಟಾಂತವಾಯಿತು. ಮೊದಲಿನಿಂದಲೂ ಧರ್ಮಾಚರಣೆ, ದಾನ, ಪರೋಪಕಾರ ಇತ್ಯಾದಿಗಳಿಗೆ ಹೆಸರುವಾಸಿಯಾಗಿದ್ದ ಇವರ ಕೀರ್ತಿಯು ದಿಗಂತದಲ್ಲಿ ಹರಡಿತು. ಅವರಿಗೆ ತಕ್ಕಂತೆ ಹನುಮಂತಾಚಾರ್ಯ, ತಿಮ್ಮಣ್ಣಾಚಾರ್ಯ, ರಾಮಾಚಾರ್ಯ, ಶ್ರೀನಿವಾಸಾಚಾರ್ಯ, ಕೃಷ್ಣಾಚಾರ್ಯ ಎಂಬ ರತ್ನ ಸದೃಷ ಪುತ್ರರು ಇದ್ದರು. ತಂದೆಯಂತೆ ಮಕ್ಕಳು ಸಹಿತ ವ್ಯಾಕರಣ ಶಾಸ್ತ್ರ ಪಂಡಿತರಾಗಿದ್ದರು. ಇವರಲ್ಲಿ ಪೂಜ್ಯ ಹನುಮಂತಚಾರ್ಯರು ಶಾ.ಶ.೧೭೮೮ (ಕ್ರಿ.ಶ.೧೮೬೬)ರಲ್ಲಿ ಯತ್ಯಾಶ್ರಮ ಸ್ವೀಕರಿಸಿ, ಕಣ್ವ ಮಠದ ಪೀಠಾರೋಹಣ ಮಾಡಿದ ಇವರು ಶಾ.ಶ.೧೮೧೦ (ಕ್ರಿ.ಶ.೧೮೮೮) ಸರ್ವಧಾರಿ ಸಂವತ್ಸರ ಭಾದ್ರಪದ ಶುಕ್ಲ ಎಕಾದಶಿಯವರೆಗೆ ದ್ವೈತ ವೇದಾಂತ ಸಾಮ್ರಾಜ್ಯವನ್ನಾಳಿದರು. ರತ್ನ ಪಂಚಕರೆಂಬ ವಿದ್ವತ್ಪೂರ್ಣವಾದ ಗ್ರಂಥ ರಚಿಸಿದರು. ಇದರಲ್ಲಿ ಮಾಧವತೀರ್ಥಾದಿ ಗುರು ಪರಂಪರಾಗತ ಕಾಲ ನಿರ್ಣಯ ಪೂರಕ ಸ್ತೋತ್ರವೂ ಇವರದು.
ಮುಂದೆ ಇವರು ಅನೇಕ ಕಡೆ ಧರ್ಮ ಪ್ರಸಾರಾರ್ಥವಾಗಿ ದಿಗ್ವಿಜಯ ಕೈಗೊಂಡರು. ಅನವಟ್ಟಿ ಎಂಬ ಗ್ರಾಮ ಸಂಚಾರ ಮುಗಿಸಿಕೊಂಡು ವೀರಘಟ್ಟ, ಹುಣಸಿಹೊಳೆಗೆ ತೆರಳಿದರು. ಅಲ್ಲಿ ಕೆಲಕಾಲ ಕಳೆದು ಶಿಷ್ಯರ ಆಗ್ರಹದ ಆಮಂತ್ರಣದ ಮೇರೆಗೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೊರಲೊಟ್ಟಿ ಎಂಬ ಗ್ರಾಮಕ್ಕೆ ಆಗಮಿಸಿದರು. ಅಲ್ಲಿಯೇ ಶ್ರೀ ವಿದ್ಯಾಧಿರಾಜತೀರ್ಥ ಎಂಬುವರಿಗೆ ಸಂನ್ಯಾಸದೀಕ್ಷೆ ಕೊಟ್ಟು ಮಠದಾಡಳಿತವನ್ನು ಒಪ್ಪಿಸಿ, ಮುಂದೆ ಶಾ.ಶ.೧೮೧೦(ಕ್ರಿ.ಶ.೧೮೮೮) ಸರ್ವಧಾರಿನಾಮ ಸಂವತ್ಸರದ ಭಾದ್ರಪದ ಶುಕ್ಲ ಎಕಾದಶಿ ದಿನ ಹರಿಪದವನ್ನು ಸೇರಿದರು. ಇವರ ವೃಂದಾವನವು ಗೊರಲೊಟ್ಟಿಯಲ್ಲಿ ಇರುವುದು.