ಇವರು ಪೂರ್ವಾಶ್ರಮದಲ್ಲಿ ಬಿಜಾಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ಬಳೂತಿ ಎಂಬ ಊರಿನವರು. ಇವರು ವೈದಿಕ ಮನೆತನದಲ್ಲಿ ಜನಿಸಿದವರು. ತಮ್ಮ ತಪೋನಿಷ್ಠೆಯಿಂದ ಸುತ್ತಮುತ್ತಲಿನ ಜನರಲ್ಲಿ ಚಿಕ್ಕಂದಿನಿಂದಲೇ ಪ್ರಸಿದ್ಧಿ ಪಡೆದವರಾಗಿದ್ದರು. ಗಲಗಲಿಯ ಶ್ರೀ ವೇ.ಮೂ. ವೆಂಕಣ್ಣಭಟ್ಟರ ಬಳಿ ಸಂಪೂರ್ಣ ವೇದಾಧ್ಯಯನ, ಕರ್ಮಕಾಂಡದ ಪ್ರಯೋಗ, ಜೋತಿಷ್ಯ ಶಾಸ್ತ್ರದ ಆಳವಾದ ಅಭ್ಯಾಸವನ್ನು ಮಾಡಿ, ವೈದಿಕ ವೃತ್ತಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದರು. ಶ್ರೀಮದ್-ಭಾಗವತ, ಗುರುಚರಿತ್ರೆ ಗ್ರಂಥಗಳ ಪಾರಾಯಣ ಮಾಡುತ್ತ ತಮ್ಮ ತಪಸ್ಸಿನ ಬಲವನ್ನು ಅಭಿವೃದ್ಧಿಪಡಿಸಿಕೊಂಡರು. ಅನ್ನ-ಆಹಾರಗಳನ್ನು ತ್ಯಜಿಸಿ ಕೇವಲ ಉಪೋಷಣೆಯಿಂದ ಪಾರಾಯಣ ಕಾಲವನ್ನು ಕಳೆದವರು.
ಇವರ ತಪೋಮಯ ಜೀವನವನ್ನು ಅರಿತ ಶ್ರೀ ವಿದ್ಯಾಮನೋಹರತೀರ್ಥರು ಇವರಿಗೆ ಮಠದ ಸೂತ್ರವನ್ನು ವಹಿಸಿಕೊಟ್ಟು, "ವಿದ್ಯಾತಪೋನಿಧಿತೀರ್ಥ"ರೆಂಬ ನಾಮಾಭಿದಾನದಿಂದ ಕ್ರಿ.ಶ.೧೯೬೭ ರಲ್ಲಿ ಸಂನ್ಯಾಸದೀಕ್ಷೆಯನ್ನು ಕೊಟ್ಟು ಧರ್ಮ ಪ್ರಸಾರ ಮಾಡಲು ತಿಳಿಸಿದರು. ಶ್ರೀ ವಿದ್ಯಾತಪೋನಿಧಿತೀರ್ಥರು ಪೀಠಕ್ಕೆ ಬಂದ ಮೇಲೆ ಶಿಷ್ಯ ಸಂಪರ್ಕವನ್ನು ಹೆಚ್ಚಾಗಿ ಬೆಳೆಸಿ ಮಠದ ಘನತೆಯನ್ನು ಮತ್ತಷ್ಟು ಹೆಚ್ಚಿಸಿದರು. ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥರ ಪರ್ಯಾಯ ಸಂದರ್ಭದಲ್ಲಿ ಶ್ರೀ ವಿದ್ಯಾತಪೋನಿಧಿತೀರ್ಥರು ವಿಶೇಷ ಆಮಂತ್ರಿತರಾಗಿದ್ದರು.
ಇವರು ಪೀಠಕ್ಕೆ ಬಂದ ನಂತರ ಮಠಕ್ಕೆ ಸಂಬಂಧಪಟ್ಟ ಸ್ಥಿರ ಆಸ್ತಿಯನ್ನೆಲ್ಲ ಸುವ್ಯವಸ್ಥೆ ರೂಪಕ್ಕೆ ತಂದರು. ಅಲ್ಲದೇ ಮಠದ ಚಿರಸ್ಥಾಯಿಯಾದ ಕಟ್ಟಡವನ್ನು ಕಟ್ಟಿಸಿದರು. ಶ್ರೀ ಯಾಜ್ಞವಲ್ಕ್ಯ ಗುರುಗಳ ಮಂದಿರವನ್ನು ಕಟ್ಟಿಸಿ, ಅವರ ಮಹಿಮೆಯನ್ನು ಪ್ರಸಾರ ಮಾಡುವುದು ಶ್ರೀ ವಿದ್ಯಾತಪೋನಿಧಿತೀರ್ಥರ ಉತ್ಕಟ ಇಚ್ಛೆಯಾಗಿತ್ತು. ಆದರೆ ಆ ಕಾರ್ಯ ಪೂರ್ತಿಯಾಗದೇ ಹಾಗೇಯೇ ಉಳಿಯಿತು.
ವಯೋಮಾನಕ್ಕೆ ಅನುಸರಿಸಿ ದೇಹಸ್ಥಿತಿಯು ವಿಷಮಿಸುತ್ತ ಬಂದಾಗ ಯೋಗ್ಯರಾದ ಮಠದ ಉತ್ತರಾಧಿಕಾರಿಯನ್ನು ಆಯ್ದುಕೊಳ್ಳುವುದು ಮಹತ್ವದ ಸಂಗತಿಯಾಯಿತು. ಅದರಂತೆ ಬಿಜಾಪುರ ಜಿಲ್ಲೆಯ ಬದಾಮಿ ತಾಲೂಕಿನ ಹೂಲಗೇರಿ ಎಂಬ ಗ್ರಾಮದ ವೈದಿಕ ಮನೆತನದಲ್ಲಿ ಜನಿಸಿದ, ಸಂಸ್ಕೃತದ ಪ್ರಕಾಂಡ ಪಂಡಿತರೆನಿಸಿದ, ದ್ವೈತ ವೇದಾಂತವನ್ನು ಆಳವಾಗಿ ಅಭ್ಯಾಸ ಮಾಡಿದ, ಪಾಠ ಪ್ರವಚನಾದಿಗಳಲ್ಲಿ ಪ್ರಸಿದ್ಧಿಯನ್ನು ಪಡೆದ ಶ್ರೀ ಕೃಷ್ಣಾಚಾರ್ಯ ತಿಮ್ಮಣ್ಣಾಚಾರ್ಯ ಜೋಶಿ ಎಂಬುವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಆಯ್ದುಕೊಂಡು ಕ್ರಿ.ಶ. ೧೯೮೮ ಎಪ್ರಿಲ್ ೪ ರಂದು (ಶಾ.ಶ. ೧೯೧೦, ವಿಭವನಾಮ ಸಂವತ್ಸರ, ಚೈತ್ರ ಮಾಸ, ಕೃಷ್ಣ ಪಕ್ಷ, ದ್ವಿತೀಯಾ, ಸೋಮವಾರ ಶುಭದಿನ) ಸಂನ್ಯಾಸದೀಕ್ಷೆಯನ್ನು ಕೊಟ್ಟು "ವಿದ್ಯಾಭೂಷಣತೀರ್ಥ" ರೆಂಬ ನಾಮಾಭಿದಾನ ಮಾಡಿ, ಮಠದ ಆಡಳಿತವನ್ನು ಒಪ್ಪಿಸಿಕೊಟ್ಟು, ಹುಣಸಿಹೊಳೆಯಲ್ಲಿ ದಿನಾಂಕ ೨-೬-೧೯೮೮ ರಂದು ವೃಂದಾವನಸ್ಥರಾದರು.