||ಶ್ರೀ ವಿಠ್ಠಲ ಕೃಷ್ಣೋ ವಿಜಯತೇ||
ಶ್ರೀ ಯಾಜ್ಞವಲ್ಕ್ಯ ಗುರುಭ್ಯೋನಮಃ
ಶ್ರೀ ಮಾಧವತೀರ್ಥ ಗುರುಭ್ಯೋನಮಃ

ಪೀಠಿಕೆ :-ಸನಾತನ ಧರ್ಮವಾದ ಹಿಂದೂ ಧರ್ಮವು ವೇದಾಧಾರದ ತತ್ವದ ಮೇಲೆ ಇರುವದೆಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಶ್ರೀ ಮನ್ನಾರಾಯಯಣ ಸ್ವರೂಪವಾದ ಶ್ರೀ ವೇದವ್ಯಾಸರು ಕಲಿಯುಗದಲ್ಲಿನ ಜನರು ಇತರ ಯುಗದಲ್ಲಿಯ ಜನರಿಗಿಂತ ಅಲ್ಪಾಯುಗಳೂ, ಮಂದಮತಿಗಳಾಗಿರುತ್ತಾರೆ. ಹೀಗಾಗಿ ಕಲಿಯುಗದ ಜನರು ಕನಿಷ್ಟ ಪಕ್ಷಕ್ಕೆ ಒಂದೊಂದು ವೇದಭಾಗವನ್ನಾದರೂ ಅಧ್ಯಯನ ಮಾಡಿಕೊಂಡು ಇರಲಿ ಎಂಬ ಲೋಕಕಲ್ಯಾಣದ ಉದ್ದೇಶದಿಂದ ವೇದರಾಶಿಯನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದರು. (1) ಋಗ್ವೇದ (2) ಯಜುರ್ವೇದ (3) ಸಾಮವೇದ (4) ಅಥರ್ವವೇದ ಹಾಗೂ ಈ ಪ್ರತಿಯೊಂದು ವೇದಕ್ಕೂ ಒಬ್ಬೊಬ್ಬ ಋಷಿಯನ್ನು ಪ್ರವರ್ತಕರನ್ನಾಗಿ ಮಾಡಿದರು. ಪೈಲರಿಗೆ ಋಗ್ವೇದವನ್ನೂ, ವೈಶಂಪಾಯನರಿಗೆ ಯಜುರ್ವೇದವನ್ನೂ, ಜೈಮಿನಿಗೆ ಸಾಮವೇದವನ್ನೂ, ಸುಮಂತುವಿಗೆ ಅಥರ್ವಣವೇದವನ್ನೂ ಉಪದೇಶಿಸಿದರು. ಈ ಶಿಷ್ಯರುಗಳೇ ಆಯಾ ವೇದಗಳಿಗೆ ಆದ್ಯ ಪ್ರವರ್ತಕರೆಂದು ತಿಳಿದು ಬರುತ್ತದೆ. (ವೇದಗಳು ಮತ್ತು ಅವುಗಳ ಶಾಖೆಗಳ ಸಂಕ್ಷಿಪ್ತ ಮಾಹಿತಿ:- ಋಗ್ವೇದದಲ್ಲ್ಲಿ 5 ಶಾಖೆಗಳಿವೆ. ಇವುಗಳಲ್ಲಿ ಶಾಕಲ ಶಾಖೆಯ ಬ್ರಾಹ್ಮಣರು ಮಾತ್ರ ಈಗ ಇದ್ದಾರೆ. ಈ ಶಾಕಲ ಶಾಖೆಯ ಬ್ರಾಹ್ಮಣರಲ್ಲಿ ಅದ್ವೈತ ಮತಾನುಯಾಯಿಗಳೂ ಇದ್ದಾರೆ, ದ್ವೈತ ಮತಾನುಯಾಯಿಗಳೂ ಇದ್ದಾರೆ, ವಿಶಿಷ್ಟಾದ್ವೈತ ಮತಾನುಯಾಯಿಗಳೂ ಇದ್ದಾರೆ. ಕೃಷ್ಣ ಯಜುರ್ವೇದದಲ್ಲಿ 86 ಶಾಖೆಗಳಿರುತ್ತವೆಂದು ಚರಣವ್ಯೂಹ ಗ್ರಂಥದಲ್ಲಿ ಸೂಕ್ತವಾಗಿರುತ್ತದೆ. ಈ 86 ಶಾಖೆಗಳಲ್ಲಿ (1) ತೈತ್ತಿರೀಯ (2) ಕಠ (3) ಮೈತ್ರಾಯಣಿ ಎಂ‌ಬ ಮೂರೇ ಶಾಖೆಗಳು ಮಾತ್ರ ಈಗ ಉಪಲಬ್ಧವಾಗಿವೆ. ತೈತ್ತಿರೀಯ ಶಾಖೆಯ ಬ್ರಾಹ್ಮಣರಲ್ಲಿ ಅದ್ವೈತ ಹಾಗೂ ದ್ವೈತ ಮತಾನುಯಾಯಿಗಳು ಇದ್ದಾರೆ. ಸಾಮವೇದದಲ್ಲಿ ಒಂದು ಸಾವಿರ (1000) ಶಾಖೆಗಳು ಇರುತ್ತವೆಂದು ಚರಣವ್ಯೂಹ ಗ್ರಂಥದಲ್ಲಿ ಉಕ್ತವಾಗಿದೆ. ಇವುಗಳಲ್ಲಿ (1) ರಾಣಾಯನೀಯ (2) ಕೌಥುವ ಇವೆರಡೇ ಶಾಖೆಗಳು ಮಾತ್ರ ಈಗ ಉಪಲಬ್ಧವಾಗಿವೆ. ಈ ರಾಣಾಯನೀಯ ಶಾಖೆಯ ಬ್ರಾಹ್ಮಣರು ಅದ್ವೈತ ಮತದಲ್ಲಿಯೂ ಹಾಗೂ ದ್ವೈತ ಮತದಲ್ಲಿಯೂ ಇದ್ದಾರೆ. ಅಥರ್ವವೇದದಲ್ಲಿ 9 ಶಾಖೆಗಳು ಇರುತ್ತವೆ. ಇವುಗಳಲ್ಲಿ (1) ಪಿಪ್ಪಲಾದ ಶಾಖೆ (2) ಶೌನಕೀಯ ಶಾಖೆ ಇವೆರಡೇ ಶಾಖೆಗಳು ಮಾತ್ರ ಈಗ ಉಪಲಬ್ಧವಾಗಿವೆ.)

"ಕರ್ಮ, ಉಪಾಸನೆ, ಜ್ಞಾನವೆಂಬ 3 ಪ್ರಕರಣಗಳೂ ಇರುವ ಆ ಆಯಾತಯಾಮ ಸಂಜ್ಞಕವಾದ ಶುಕ್ಲಯಜುರ್ವೇದವನ್ನು" ವೈಶಂಪಾಯನ ಋಷಿಗಳ ಶಿಷ್ಯರಾದ ಶ್ರೀ ಯಾಜ್ಞವಲ್ಕ್ಯರು ಭಗವಾನ್ ಸೂರ್ಯದೇವರನ್ನು ಕುರಿತು ತಪಸ್ಸನ್ನಾಚರಿಸಿ, ಭಗವಾನ್ ಸೂರ್ಯದೇವರಿಂದ ಶುಕ್ಲ ಯಜುರ್ವೇದವನ್ನು ಪಡೆದುಕೊಂಡರು ಮತ್ತು ಶ್ರೀ ಯಾಜ್ಞವಲ್ಕ್ಯರು ಶುಕ್ಲಯಜುರ್ವೇದದ ಶಾಖಾ ಪ್ರವರ್ತಕರಾದರು. ಶ್ರೀ ಯಾಜ್ಞವಲ್ಕ್ಯರು ಶುಕ್ಲಯಜುರ್ವೇದವನ್ನು ತಮ್ಮ ಶಿಷ್ಯರಾದ ಕಣ್ವಋಷಿ, ಮಾಧ್ಯಾಂದಿನ ಋಷಿ ಮತ್ತು ಇನ್ನಿತರ 13 ಬ್ರಹ್ಮಚಾರಿಗಳಿಗೆ ಕಲಿಸಿದರು. ಇದೇ ಋಷಿಮುನಿಗಳ ಹೆಸರಲ್ಲಿ ಶುಕ್ಲಯಜುರ್ವೇದದಲ್ಲಿ ಕಾಣ್ವಶಾಖೆ, ಮಾಧ್ಯಾಂದಿನ ಶಾಖೆ ಹಾಗೂ ಇನ್ನಿತರ 13 ಶಾಖೆಗಳಾದವು. ಈ 15 ಶಾಖೆಗಳಲ್ಲಿ ಕಾಣ್ವಶಾಖೆ ಮತ್ತು ಮಾಧ್ಯಾಂದಿನ ಶಾಖೆ ಎಂಬ ಎರಡೂ ಶಾಖೆಗಳು ಇಂದಿಗೂ ಉಪಲಬ್ಧವಾಗಿವೆ. ಕಾಣ್ವ ಮತ್ತು ಮಾಧ್ಯಾಂದಿನ ಇವೆರಡೂ. ಶಾಖೆಗಳ ಬ್ರಾಹ್ಮಣರು ಕಾತ್ಯಾಯಿನಿ ಸೂತ್ರಾನುಯಾಯಿಗಳಾಗಿದ್ದಾರೆ. ಕಾಣ್ವಶಾಖೆಯ ಬ್ರಾಹ್ಮಣರಲ್ಲಿ ಅದ್ವೈತ ಮತಾನುಯಾಯಿಗಳೂ ಇದ್ದಾರೆ, ದ್ವೈತ ಮತಾನುಯಾಯಿಗಳೂ ಇದ್ದಾರೆ, ವಿಶಿಷ್ಟಾದ್ವೈತ ಮತಾನುಯಾಯಿಗಳೂ ಇದ್ದಾರೆ. (ವೇದಕಾಲದಿಂದ ಆಧುನಿಕ ಕಾಲದವರೆಗೆ ನಡೆದುಬಂದ ಶುಕ್ಲ ಯಜುರ್ವೇದೀಯರಲ್ಲಿಯ ದ್ವೈತ ಪರಂಪರೆಯ ಇತಿಹಾಸವು :- ಮಾಧ್ಯಾಂದಿನ ಪಾಠದ ಬೃಹದಾರಣ್ಯಕೋಪನಿಷತ್ತಿನ 3 ನೇ ಅಧ್ಯಾಯದ ಏಳನೇ ಬ್ರಾಹ್ಮಣದ 22 ನೇ ಮಂತ್ರದಲ್ಲಿಯೂ ಹೇಳಲ್ಪಟ್ಟ "ವಿಜ್ಞಾನಾದಂತರ ಇತಿ ಕಾಣ್ವಾಃ" ಎಂಬ ಸೂತ್ರದ ಮೇಲಿಂದ ಜೀವನಿಂದ ಪರಮಾತ್ಮನು ಭಿನ್ನವಾಗಿದ್ದಾನೆಂದು ಕಣ್ವಶಾಖೆಯ ಬ್ರಾಹ್ಮಣರು ಪ್ರಾಚೀನ ಕಾಲದಿಂದಲೇ ಒಪ್ಪುತ್ತಿದ್ದರೆಂದೂ, "ಆತ್ಮನೋಂತರ ಇತಿ ಮಾಧ್ಯಾಂದಿನಾಃ " ಎಂದರೆ ಜೀವನದಿಂದ ಪರಮಾತ್ಮನು ಬೇರೆಯಾಗಿದ್ದಾನೆಂದು ಮಾಧ್ಯಾಂದಿನ ಶಾಖೆಯ ಬ್ರಾಹ್ಮಣರೂ ಒಪ್ಪುತ್ತಿದ್ದರೆಂದೂ ಈ ನಮ್ಮ ಉಪನಿಷತ್ ವಾಕ್ಯಗಳಿಂದ ಸಿದ್ಧವಾಗದೆ ಇರದು. ಇದಲ್ಲದೇ, ಶ್ರೀ ವೇದವ್ಯಾಸರು ಸಹ ಬ್ರಹ್ಮಸೂತ್ರ ಭಾಷ್ಯದಲ್ಲಿ ಜೀವ ಪರಮಾತ್ಮ ಭೇದಗಳ ವಿಷಯವಾಗಿ ವರ್ಣನೆಯನ್ನು ಮಾಡುವಾಗ "ಓಂ ಶಾರೀರಶ್ಚೋಭಯೇಪಿಂಕಿ ಭೇದೇನೈನ ಮಧೀಯತೇ" ಎಂದು "ಕಣ್ವಮಾದ್ಧ್ಯಾಂದಿನ ಶೃತಿಗಳ" ಆಧಾರವನ್ನೇ ತಕ್ಕೊಂಡು ದ್ವೈತ ಸಿದ್ಧಾಂತವನ್ನು ಪ್ರಬೋಧಿಸಿರುವರು. ಇದರ ಮೇಲಿಂದ ಶ್ರೀ ಯಾಜ್ಞವಲ್ಕ್ಯರ ಹಾಗೂ ವೇದವ್ಯಾಸರ ಕಾಲದಿಂದ ಅಂದರೆ ವೇದಕಾಲದಿಂದಲೇ ಶುಕ್ಲಯಜುಶ್ಯಾಖೆಯಲ್ಲಿಯ ಬ್ರಾಹ್ಮಣರನೇಕರು, ಜೀವ ಪರಮಾತ್ಮರಲ್ಲಿಯ ಬೇಧವನ್ನು ನಂಬುತ್ತ ದ್ವೈತ ಸಿದ್ಧಾಂತವನ್ನು ಆಚಾರಿಸುತ್ತಿದ್ದರೆಂದು, ಮೇಲಿನ ಸೂತ್ರಗಳ ಆಧಾರದ ಮೇಲಿಂದ ಸ್ಪಷ್ಟವಾಗುವದು.) ಶುಕ್ಲ ಯಜುರ್ವೇದೀಯ ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತ ಮೂರೂ ಅನುಯಾಯಿಗಳೂ, ಶುಕ್ಲ ಯಜುರ್ವೇದದ ತತ್ವದ ಮೇಲೆ ಶುಕ್ಲ ಯಜುರ್ವೇದ ಮಂತ್ರಗಳನ್ನು ಪಠಿಸುತ್ತ, ಕಾತ್ಯಾಯಿನಿ ಸೂತ್ರದ ಪ್ರಕಾರವೇ ಎಲ್ಲರೂ ನಿತ್ಯ ಕಾರ್ಯಕ್ರಮ ಹಾಗೂ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ವೇದಕಾಲದಿಂದಲೂ ಆಚರಿಸುತ್ತಾ ಬಂದಿದ್ದಾರೆ. ಮೂರೂ ಅನುಯಾಯಿಗಳಿಗೆ ಶುಕ್ಲ ಯಜುರ್ವೇದವೇ ಹಾಗೂ ಕಾತ್ಯಾಯಿನಿ ಸೂತ್ರವೇ ಮಹತ್ವವಾದದ್ದು ಎಂಬುದು ವಿಶೇಷವಾಗಿದೆ. ಮಾಧ್ಯಂದಿನ ಶಾಖೆಯ ಬ್ರಾಹ್ಮಣರು ಗುರ್ಜರ, ಮಹಾರಾಷ್ಟ್ರ, ಕರ್ನಾಟಕ, ಉತ್ತರ ಹಿಂದುಸ್ಥಾನದಲ್ಲಿಯೂ ಇದ್ದಾರೆ. ಕಾಣ್ವಶಾಖೀಯ ಬ್ರಾಹ್ಮಣರು ಗುರ್ಜರ, ಮಹಾರಾಷ್ಟ್ರ, ಕರ್ನಾಟಕ, ಅಂದ್ರ, ದ್ರಾವಿಡ ಈ ಪಂಚ ದ್ರಾವಿಡಗಳಲ್ಲಿ ಇದ್ದಾರೆ. ಕಾಲಾನುಸಾರವಾಗಿ ಆ ರಾಜ್ಯಗಳಲ್ಲಿರುವ ವಿದ್ವಾಂಸರು ಹಾಗೂ ಅನೇಕ ಆಶ್ರಮಗಳು ಶುಕ್ಲ ಯಜುರ್ವೇದ ತತ್ವಗಳನ್ನು ಸಮಾಜಕ್ಕೆ ಸಲ್ಲಿಸುತ್ತ, ಶುಕ್ಲ ಯಜುರ್ವೇದ ಪ್ರಚಾರ ಮಾಡುತ್ತಾ ಬಂದಿದ್ದಾರೆ.


Back