ಶ್ರೀ ಮಾಧವತೀರ್ಥರ ಪೂರ್ವಾಶ್ರಮ ನಾಮಧೇಯ ಶ್ರೀ ವೆಂಕಟೇಶಾಚಾರ್ಯ
ಶಾ.ಶ.೧೭ನೇ ಶತಮಾನದಲ್ಲಿ ಶ್ರೀ ವೆಂಕಟೇಶಾಚಾರ್ಯರು ಗುಲಬರ್ಗಾ ಜಿಲ್ಲೆಯ ಸುರಪುರ ಎಂಬ ಪಟ್ಟಣದಲ್ಲಿ ವಾಸಿಸುತ್ತಿದ್ದರು. ಇವರು ಕಣ್ವ ಶಾಖೆಯ ವೈಷ್ಣವ ಬ್ರಾಹ್ಮಣರು. ಇವರು ಸದಾಚಾರ ಸಂಪನ್ನರೂ, ಒಳ್ಳೆಯ ತೇಜಸ್ವಿಗಳೂ ಆಗಿದ್ದರು. ಇವರು ದಯಾಘನರೂ, ವಿರಕ್ತ ಶಿಖಾಮಣಿಗಳೂ ಆಗಿದ್ದು ಶಾಂತಿಯೇ ಮೂರ್ತಿವೆತ್ತಂತ್ತಿದ್ದರು. ಯಾವಾಗಲೂ ಶ್ರೀ ಆದಿಶೇಷನ ಉಪಾಸನೆಯಲ್ಲಿಯೇ ಕಾಲ ಕಳೆಯುತ್ತ ಆತನ ಪರಮಾನುಗ್ರಹಕ್ಕೆ ಪಾತ್ರರಾಗಿದ್ದರು. ಅಚಾರ್ಯರು ಗ್ರಂಥಾವಲೋಕನ, ಪುರಾಣ, ಪಾಠ ಪ್ರವಚನ,ಭಗವಂತನ ಚಿಂತೆಯಲ್ಲಿ ಆಯುಷ್ಯವನ್ನು ಕಳೆದರು.
ಹೀಗೆಯೇ ಜೀವನ ನಡೆದಿರಲು ಒಂದು ದಿನ ಆದಿಶೇಷನು ಸ್ವಪ್ನದಲ್ಲಿ ದರ್ಶನ ಕೊಟ್ಟು, "ಆಚಾರ್ಯ ಶ್ರೇಷ್ಠನೇ, ಇನ್ನು ಕೆಲವೇ ದಿನಗಳಲ್ಲಿ ನಿನಗೆ ವಾಯ್ವಂಶ ಸಂಭೂತರಾದ ಮಹಾ ತಪಸ್ವಿಗಳ ದರ್ಶನವಾಗುವುದು. ಅವರಿಂದ ನೀನು ಈ ಜನ್ಮವನ್ನು ಬಿಟ್ಟು ಬೇರೊಂದು ಜನ್ಮವನ್ನು ಹೊಂದುವಿ. ಅವರು ನಿನಗೆ ವಾಯು ದೇವರು ಪ್ರಸಾರ ಮಾಡಿದ ವಿಷ್ಣುಸರ್ವೋತ್ತಮತ್ವದ ಪ್ರಸಾರ ಕಾರ್ಯವನ್ನು ವಹಿಸಿಕೊಡುವರು. ಅದನ್ನು ನೀನು ನಿರ್ವಹಿಸಿ ಪರಮ ಪದವನ್ನು ಹೊಂದು." ಎಂಬುದಾಗಿ ಅಪ್ಪಣೆಯನ್ನಿತ್ತರು.
ಅಚಾರ್ಯರಿಗೆ ಕೂಡಲೇ ಎಚ್ಚರವಾಗಿ, ಸ್ವಪ್ನದಲ್ಲಿ ತಾವು ಕಂಡಿದ್ದನ್ನು ನೆನೆದು, ಅವರ ಮನಸ್ಸು ಆನಂದಾಶ್ಚರ್ಯಗಳಿಂದ ತುಂಬಿ ತುಳುಕಿತು. ಬೆಳಗಾದ ಮೇಲೆ ಕಣ್ವ ಶಾಖೆಯ ಪುರ ಪ್ರಮುಖರಾದ ಕೆಲ ಮಹನೀಯರಿಗೆ ತಮ್ಮ ಸ್ವಪ್ನದೃಷ್ಟಾಂತವನ್ನು ತಿಳಿಸಿದರು. ಅವರೆಲ್ಲರಿಗೂ ಅತೀವ ಆಶ್ಚರ್ಯವಾಯಿತು.
ಅಚಾರ್ಯರಿಗಾದ ಸ್ವಪ್ನದೃಷ್ಟಾಂತವು ಸತ್ಯವಾಗಿ ಪರಿಣಮಿಸುವ ಯೋಗ ಕೂಡಿ ಬಂದಿತೋ ಎನ್ನುವಂತೆ ಮುಂದೆ ಕೆಲವೇ ದಿನಗಳಲ್ಲಿ ಶ್ರೀ ವಾಯುದೇವರ ತೃತೀಯಾವತಾರರಾದ ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಉಡುಪಿಯ ಅಷ್ಟ ಮಠಗಳಲ್ಲೊಂದಾದ ಶಿರೂರು ಮಠದ ಇಪ್ಪತ್ತು ಮೂರನೇ ಶ್ರೀಪಾದಂಗಳವರಾದ ಶ್ರೀ ಲಕ್ಷ್ಮೀಮನೋಹರತೀರ್ಥರು ತಾಳಿಕೋಟೆಯವರೆಗೂ ಬಂದಿರುವರೆಂದೂ, ಅಲ್ಲಿಂದ ಸುರಪುರಕ್ಕೆ ದಯಮಾಡಿಸುವರೆಂದೂ ವಾರ್ತೆ ಬಂದಿತು. ಈ ವಾರ್ತೆಯನ್ನು ಕೇಳಿ ವೆಂಕಟೇಶಾಚಾರ್ಯರು ಹಾಗೂ ಸುರಪುರದ ಬ್ರಾಹ್ಮಣ ವೃಂದಕ್ಕೂ ಪರಮಾನಂದವಾಯಿತು.
ಸುರಪುರಕ್ಕೆ ಶ್ರೀಪಾದಂಗಳವರ ಸುಖಾಗಮನವಾಯಿತು. ಸುರಪುರದ ಬ್ರಾಹ್ಮಣ ವೃಂದವು ಸಕಲ ಮರ್ಯಾದೆಗಳೊಂದಿಗೆ ಶ್ರೀಪಾದಂಗಳವರನ್ನು ಹಾಗೂ ಅವರ ಶಿಷ್ಯ ಪರಿವಾರವನ್ನು ವೈಭವದಿಂದ ಸ್ವಗತ ಮಾಡಿತು. ಶ್ರೀಗಳವರ ಉಪಾಸ್ಯ ದೇವರಾದ ಶ್ರೀ ವಿಟ್ಠಲ ಕೃಷ್ಣನ ಪೂಜೆ ಹಾಗೂ ಶ್ರೀಗಳವರಿಗೆ ಭಿಕ್ಷೆ ಮುಂತಾದ ವ್ಯವಸ್ಥೆ ಮಾಡಿ ತಮ್ಮ ಸೇವೆಯನ್ನು ಸಲ್ಲಿಸಿದರು. ಶ್ರೀಗಳವರಲ್ಲಿ ಅತುಲ ಭಕ್ತ್ಯಾದರಗಳನ್ನು ತೋರಿಸಿದರು. ಶ್ರೀ ಲಕ್ಷ್ಮೀಮನೋಹರತೀರ್ಥ ಶ್ರೀಪಾದಂಗಳವರಿಗೆ ವೆಂಕಟೇಶಾಚಾರ್ಯರ ತೇಜಪುಂಜವಾದ ಮುಖವನ್ನು ಅವರ ಶಾಂತ ಸ್ವಭಾವವನ್ನೂ, ಭಕ್ತಿ ವಿಶ್ವಾಸಗಳನ್ನು ಕಂಡು ವಿಶೇಷವಾದ ಆನಂದವಾಯಿತು.
ಅಂದು ರಾತ್ರಿ ಶ್ರೀಪಾದಂಗಳವರಿಗೆ ಸ್ವಪ್ನ ದೃಷ್ಟಾಂತವಾಯಿತು. ಶ್ರೀಮನ್ನಾರಾಯಣನು ಸ್ವಪ್ನದರ್ಶನವಿತ್ತು, ಶೀಪಾದಂಗಳವರಿಗೆ, "ಯತಿಶ್ರೇಷ್ಠನೇ, ನಾಳೆ ನನ್ನ ಭಕ್ತನಾದ ಆದಿಶೇಷನ ಪರಮಾನುಗ್ರಹಕ್ಕೆ ಪಾತ್ರನಾದ ಹಾಗೂ ಒಳ್ಳೇ ಪ್ರತಿಭಾವಂತನೂ ಆದ ನನ್ನ ಭಕ್ತನೋರ್ವನು ನಿನ್ನ ಬಳಿಗೆ ಬರುವನು. ಅವನಿಗೆ ನಿನ್ನ ಮೂಲಸ್ಥಾನದಲ್ಲಿ ಆಶ್ರಯ ಕೊಟ್ಟು ಅನುಗ್ರಹ ಮಾಡು. ಅವನು ವಾಯುದೇವರು ಪ್ರಸಾರ ಮಾಡಿದ ತತ್ವಗಳನ್ನು ಪ್ರಚಾರ ಮಾಡಲು ಸಮರ್ಥನಾಗಿರುವನು. ಅವನಿಂದ ಲೋಕದಲ್ಲಿ ನಿನ್ನ ಕೀರ್ತಿಯೂ ಹೆಚ್ಚುವುದು. ಇದಕ್ಕೆ ನೀನು ವಿಮುಖನಾಗಬೇಡ." ಎಂದು ಆಜ್ಞಾಪಿಸಿದನು. ಕೂಡಲೇ ಶ್ರೀಗಳವರಿಗೆ ಎಚ್ಚರವಾಗಿ, ಸ್ವಪ್ನದೃಷ್ಟಾಂತವನ್ನು ನೆನೆದು ಆನಂದಪುಳಕಿತರಾದರು.
ಮರುದಿನ ಬೆಳಿಗ್ಗೆ, ಶ್ರೀಪಾದಂಗಳವರು ಸುರಪುರದ ಎಲ್ಲ ಬ್ರಾಹ್ಮಣ ವೃಂದವನ್ನು ಕರೆದು, ಅವರು ಭಕ್ತ್ಯಾತಿಶಯದಿಂದ ಮಾಡಿದ ಗುರುಸೇವೆಯನ್ನು ಪ್ರಶಂಸಿಸಿ, ತಮಗಾದ ಸ್ವಪ್ನ ದೃಷ್ಟಾಂತವನ್ನು ತಿಳಿಸಿದರು. ಅದನ್ನು ಕೇಳಿ, ಅಲ್ಲಿ ಸೇರಿದ್ದ ಭಕ್ತಜನರಿಗೆ ರೋಮಾಂಚನವಾಯಿತು. ಇತ್ತ ಶ್ರೀವೆಂಕಟೇಶಾಚಾರ್ಯರು ತಮಗಾದ ಸ್ವಪ್ನದೃಷ್ಟಾಂತದ ಮೇರೆಗೆ ತಮಗೆ ನಿಜವಾದ ಮಾರ್ಗದರ್ಶಕ ಗುರುಗಳು ಇವರೇ ಎಂದೂ, ಅಂತೆಯೇ ಭಗವಂತನು ಇವರಿಗೂ ಹೀಗೆ ಪ್ರೇರಣೆ ಮಾಡಿರುವನೆಂದು ಭಾವಿಸಿ, ಕೆಲದಿನಗಳ ಹಿಂದೆ ತಮಗೆ ಆದ ಸ್ವಪ್ನ ದೃಷ್ಟಾಂತವನ್ನು ಶ್ರೀ ಲಕ್ಷ್ಮೀಮನೋಹರತೀರ್ಥರಿಗೆ ವಿವರಿಸಿದರು. ಆಗ ಶೀಪಾದಂಗಳವರು ತಮಗೆ ಆದ ಸ್ವಪ್ನದ ಮೂಲಕ ಆದ ಭಗವದಾಜ್ಞೆಯ ಮೇರೆಗೆ ವೆಂಕಟೇಶಾಚಾರ್ಯರೇ ಆ ವ್ಯಕ್ತಿ. ಅವರ ದಿವ್ಯ ತೇಜಸ್ಸು, ವಿಷ್ಣುಭಕ್ತಿಯಿಂದ ಪರಿಪಕ್ವವಾಗಿರುವ ಅವರ ಮನಸ್ಸನ್ನು ಕಂಡು ತಮ್ಮ ಧರ್ಮ ಪ್ರಸಾರದ ಬೀಜಾರೋಪಣಕ್ಕೆ ಇವರ ಮನೋಕ್ಷೇತ್ರವು ಯೋಗ್ಯವಾಗಿರುವುದೆಂದು ನಿಶ್ಚಯಿಸಿ ಶ್ರೀ ವೆಂಕಟೇಶಾಚಾರ್ಯರಿಗೆ ಸಂನ್ಯಾಸಾಶ್ರಮ ಕೊಡುವುದಾಗಿ ತಿಳಿಸಿದರು. ಈ ಮಹತ್ವದ ಕಾರ್ಯವನ್ನು ಜರುಗಿಸಲು ಶ್ರೀಕೃಷ್ಣನ ಸನ್ನಿಧಿಯೇ ಯೋಗ್ಯವೆಂದೂ, ಇಲ್ಲಿಯ ಸಕಲ ಭಕ್ತವೃಂದ ಉಡುಪಿಗೆ ಆಗಮಿಸಿ ಈ ಶುಭಕಾರ್ಯವನ್ನು ಪೂರೈಸಿಕೊಂಡು ಬರಬೇಕೆಂದು ಅಪ್ಪಣೆ ಮಾಡಿದರು. ಶ್ರೀಪಾದಂಗಳವರಿಂದ ಆಜ್ಞಪ್ತರಾದ ವೆಂಕಟೇಶಾಚಾರ್ಯರು ತಮ್ಮ ಪ್ರಮುಖ ಪರಿವಾರದೊಂದಿಗೆ ಸಂನ್ಯಾಸದೀಕ್ಷೆಯನ್ನು ಸ್ವೀಕರಿಸಲು ಶ್ರೀಕೃಷ್ಣನ ಸನ್ನಿಧಾನವಾದ ಉಡುಪಿಗೆ ಪ್ರಯಾಣ ಬೆಳೆಸಿದರು.
ಶ್ರೀ ಲಕ್ಷ್ಮೀಮನೋಹರತೀರ್ಥ ಶ್ರೀಪಾದಂಗಳವರು ಉಡುಪಿಯಲ್ಲಿ ಸಭೆಯೊಂದನ್ನು ಕರೆದು, ಸುರಪುರದಲ್ಲಿ ತಮಗಾದ ಸ್ವಪ್ನದೃಷ್ಟಾಂತವನ್ನೂ, ಸುರಪುರದ ಬ್ರಾಹ್ಮಣ ವೃಂದವು ಉಡುಪಿಗೆ ಆಗಮಿಸಿದ ವರ್ತಮಾನವನ್ನೂ ಹಾಗೂ ಶ್ರೀ ವೆಂಕಟೇಶಾಚರ್ಯರಿಗೆ ಸಂನ್ಯಾಸದೀಕ್ಷೆ ಕೊಡುವ ವಿಚಾರವನ್ನೂ ಸಭೆಯಲ್ಲಿರುವ ಉಳಿದ ಅಷ್ಟ ಮಠಗಳ ಯತಿವರ್ಯರಿಗೆ ನಿವೇದಿಸಿದರು. ತೇಜೋಮೂರ್ತಿಗಳು, ಆದಿಶೇಷನ ಉಪಾಸನೆ ಮಾಡಿ ಅವನ ಅನುಗ್ರಹವನ್ನು ಸಂಪಾದಿಸಿದವರಾದ ಸುರಪುರದ ಶ್ರೀ ವೆಂಕಟೇಶಾಚಾರ್ಯರನ್ನು ಸಭೆಯಲ್ಲಿ ವಿರಾಜಮಾನರಾಗಿದ್ದ ಅಷ್ಟ ಮಠದ ಯತಿವರೇಣ್ಯರಿಗೆ ಪರಿಚಯಿಸಿದರು. ಎಲ್ಲ ಯತಿವರೇಣ್ಯರಿಗೆ ಆನಂದಾಶ್ಚರ್ಯವಾಯಿತು. ಭಗವಂತನ ಇಚ್ಚೆಯಂತೆ ಎಲ್ಲ ಕಾರ್ಯಗಳು ನೇರವೇರಲಿ ಎಂದು ಹೇಳಿ, ಶ್ರೀ ವೆಂಕಟೇಶಾಚಾರ್ಯರಿಗೆ ಸಂನ್ಯಾಸ ದೀಕ್ಷೆಯನ್ನು ಕೊಡುವ ಶುಭದಿನವನ್ನು ಗೊತ್ತು ಮಾಡಿದರು. ಈ ಭಾವೀ ನೂತನ ಯತಿಗಳು ಮಹಾ ಜ್ಞಾನಿಗಳು ಹಾಗೂ ಮಹಾ ತಪೋಧನರೂ ಆದ ಶ್ರೀ ಕಣ್ವ ಮಹರ್ಷಿಗಳ ಪರಂಪರೆಯಲ್ಲಿ ಬಂದವರಾದ್ದರಿಂದ ಈ ಗುರುಪರಂಪರೆಯನ್ನು ಅಂಥ ಮಹರ್ಷಿಗಳ ಹೆಸರಿನಿಂದ ಕರೆಯುವುದು ಯಥೋಚಿತವಾಗಿದೆ, ಆ ಜ್ಞಾನಿಗಳ ಹೆಸರಿನಿಂದಲೇ ಮಠವು ಲೋಕದಲ್ಲಿ ಪ್ರಸಿದ್ಧಿಯನ್ನು ಪಡೆಯಲಿ, ಆದ್ದರಿಂದ ಮಠಕ್ಕೆ "ಕಣ್ವ ಮಠ" ಎಂಬುದಾಗಿ ಹೆಸರಿಸುವುದು ಅತ್ಯಂತ ಯೋಗ್ಯವಾಗಿದೆ ಎಂದು ನಿಷ್ಕರ್ಷಿಸಲ್ಪಟ್ಟಿತು. ಶ್ರೀಲಕ್ಷ್ಮೀಮನೋಹರತೀರ್ಥರು ಶ್ರೀವೆಂಕಟೇಶಾಚಾರ್ಯರಿಗೆ ಸಂನ್ಯಾಸ ದೀಕ್ಷಾ ಪೂರ್ವದಲ್ಲಿ ನಡೆಯಬೇಕಾದ ಎಲ್ಲ ವಿಧಿವಿಧಾನಗಳನ್ನು ಪೂರೈಸಿಕೊಳ್ಳಲು ಅಪ್ಪಣೆ ಮಾಡಿದರು.
ಶ್ರೀಗಳವರ ಆಜ್ಞಾನುಸಾರ ವೆಂಕಟೇಶಾಚಾರ್ಯರು ಪರಮಪಾವನವಾದ ಮಧ್ವಸರೋವರದಲ್ಲಿ ಪವಿತ್ರ ಸ್ನಾನವನ್ನು ಮಾಡಿ, ನಿತ್ಯಾಹ್ನೀಕಗಳನ್ನು ಮುಗಿಸಿಕೊಂಡು, ಶ್ರೀ ಕೃಷ್ಣ, ಅನಂತೇಶ್ವರ, ಚಂದ್ರಮೌಳೇಶ್ವರ ದೇವರ ದರ್ಶನವನ್ನು ಪಡೆದು, ತಮ್ಮ ಸಂನ್ಯಾಸ ದೀಕ್ಷಾಪೂರ್ವದಲ್ಲಿ ನಡೆಯಬೇಕಾದ ಎಲ್ಲ ಕರ್ಮಾದಿಗಳನ್ನು ವಿಧಿಪೂರ್ವಕವಾಗಿ ಪೂರೈಸಿದರು.ಉಡುಪಿಯ ಅಷ್ಟಮಠದ ಯತಿವರೇಣ್ಯರೂ, ಶ್ರೀ ಲಕ್ಷ್ಮೀಮನೋಹರತೀರ್ಥರೂ, ಅನೇಕ ಪಂಡಿತೋತ್ತಮರೂ, ವಿದ್ವಾಂಸರೂ, ಭಾಗವತೋತ್ತಮರು ನೆರೆಯಿಸಿದ ಸಭೆಯಲ್ಲಿ ಆಗಮಿಸಿದರು. ಭಗವತ್ಸಂಕಲ್ಪಕ್ಕನುಗುಣವಾಗಿ ಪೂರ್ವಯೋಜಿತ ಕಾರ್ಯಕ್ರಮದಂತೆ ಶ್ರೀ ಲಕ್ಷ್ಮೀಮನೋಹರತೀರ್ಥ ಶ್ರೀಪಾದಂಗಳವರು ಶಾ.ಶ.೧೭೧೮ (ಕ್ರಿ.ಶ.೧೭೯೬) ನಳನಾಮ ಸಂವತ್ಸರ ಮಾಘ ಶುದ್ಧ ಪಂಚಮಿಯ ಶುಭ ಮುಹೂರ್ತದಲ್ಲಿ ಶ್ರೀ ವೆಂಕಟೇಶಾಚಾರ್ಯರಿಗೆ ವಿದ್ಯುಕ್ತವಾಗಿ ಸಂನ್ಯಾಸ ದೀಕ್ಷೆಯನ್ನಿತ್ತು "ಮಾಧವತೀರ್ಥ" ರೆಂಬ ನಾಮಾಭಿದಾನದಿಂದ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ ಮಾದಿ, ಶ್ರೀ ಮದಾನಂದತೀರ್ಥ ಭಗವತ್ಪಾದರಿಂದ ಪರಂಪರಾಗತವಾಗಿ ಉಪದೇಶಿಸಲ್ಪಟ್ಟ ಮೂಲ ಮಂತ್ರೋಪದೇಶ ಮಾಡಿ, ಉಪಾಸನಾರ್ಥವಾಗಿ ಶ್ರೀ ಮದಾನಂದತೀರ್ಥ ಕರಾರ್ಚಿತ ತಾಂಡವ ಶ್ರೀ ವಿಠ್ಠಲಕೃಷ್ಣನ ಮೂರ್ತಿಯನ್ನೂ, ಅಲಂಕಾರಾರ್ಥವಾಗಿ ರುಕ್ಮಿಣಿ, ಸತ್ಯಭಾಮಾ ಸಹಿತ ಶ್ರೀ ವೇಣುಗೋಪಾಲಕೃಷ್ಣನ ಪ್ರತಿಮೆಯನ್ನೂ, ಶ್ರೀ ಮುದ್ರೆ, ಬಲಮುರಿ ಶಂಖ ಇವೆಲ್ಲವುಗಳನ್ನು ದಯಪಾಲಿಸಿದರು. ಇನ್ನು ಮುಂದೆ ಇವರ ಪರಂಪರೆಯು "ಕಣ್ವ ಮಠ" ಎಂಬ ಹೆಸರಿನಿಂದ ಲೋಕದಲ್ಲಿ ಪ್ರಸಿದ್ಧಿಯನ್ನು ಪಡೆಯಲಿ ಎಂದು ಸಭೆಯಲ್ಲಿ ಉದ್ಘೋಷಿಸಿದರು ಹಾಗೂ ಈ ಮಠವು ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಲಿ ಎಂದು ಶುಭಾಶೀರ್ವಾದ ಮಾಡಿದರು. ಮಠಕ್ಕೆ ರಾಜಚಿಹ್ನೆಗಳು, ಸಕಲ ಬಿರುದಾವಳಿಗಳು, ಪಂಚ ಮುದ್ರಾಧಾರಣ ಅಧಿಕಾರ ಕೊಡಲ್ಪಟ್ಟವು.
ಕಣ್ವ ದ್ವೈತ ಸಮಾಜ ಧರ್ಮ ಸಾಮ್ರಾಜ್ಯ ಚಕ್ರವರ್ತಿಗಳಿವರು ಎಂಬರ್ಥದ ಸ್ವಹಸ್ತಾಕ್ಷರದ ಅಧಿಕಾರ ಪತ್ರವನ್ನು ಕೊಟ್ಟು ಅನುಗ್ರಹಿಸಿದರು. ಎಲ್ಲ ಮಠಾಧೀಶರೂ ಶ್ರೀ ಮಾಧವತೀರ್ಥರನ್ನು ವಿಶೇಷವಾಗಿ ಆಶೀರ್ವದಿಸಿ, ಕಣ್ವ ಮಠ ಪರಂಪರೆಯು ಅತ್ಯಂತ ಪ್ರಖ್ಯಾತಿಯನ್ನು ಹೊಂದಲಿ ಮತ್ತು ನಿನ್ನ ಹೆಸರು ಆಚಂದ್ರಾರ್ಕ ಉಳಿಯುವಂತಾಗಲಿ, ತಪಸ್ವೀಯಾಗಿ ಕೀರ್ತಿಶಾಲಿಯಾಗಿ ದಿಗ್ವಿಜಯಿಯಾಗಿ ಈ ಸಂಸ್ಥಾನವನ್ನು ನಡೆಸು. ಶ್ರೀ ವಿಠ್ಠಲಕೃಷ್ಣ ದೇವರು ಸಕಲ ಸನ್ಮಂಗಲವನ್ನು ಉಂಟು ಮಾಡಲಿ ಎಂದು ಆಶೀರ್ವಾದ ಮಾಡಿದರು. ಸಭೆಯೆಲ್ಲ ಜಯ ಜಯಕಾರ ಮಾಡಿತು. ಸಭೆಯನ್ನು ಅಲಂಕರಿಸಿದ್ದ ವಿದ್ವಾಂಸರು ಶ್ರೀ ಮಾಧವತೀರ್ಥರ ಮೇಲೆ ಭಕ್ತಿಯುತ ಪ್ರಶಂಸನಾಪರ ಪ್ರವಚನ ಮಾಡಿದರು. ಹರಿಕೀರ್ತನೆಕಾರರು ತಮ್ಮ ಸುಮಧುರವಾದ ಕಂಠದಿಂದ ಭಗವನ್ನಾಮ ಸಂಕೀರ್ತನೆ ಮಾಡಿದರು. ವಿದ್ವಜ್ಜನರಿಗೆ ವಿಶೇಷ ಸಂಭಾವನೆ ನೀಡಿ, ಗೌರವಿಸಿದರು. ಬ್ರಾಹ್ಮಣರೆಲ್ಲರಿಗೆ ದಕ್ಷಿಣೆ, ದಾನ ಕೊಡಲ್ಪಟ್ಟವು. ಶ್ರೀ ಲಕ್ಷ್ಮೀಮನೋಹರತೀರ್ಥ ಶ್ರೀಪಾದಂಗಳವರಿಗೆ ಶ್ರೀ ಹರಿಯ ಆಜ್ಞಾನುಸಾರ ಕಾರ್ಯಕ್ರಮವನ್ನು ಪೂರೈಸಿದುದರ ಬಗ್ಗೆ ಬಹಳೇ ಸಂತೋಷವಾಯಿತು. ಅದರಂತೆ ಶ್ರೀ ಮಾಧವತೀರ್ಥರಿಗೂ ಅದರ್ಲ್ಲೂ ವಿಶೇಷವಾಗಿ ಕಣ್ವ ಶಾಖೀಯ ವೈಷ್ಣವ ಸಮುದಾಯಕ್ಕೂ ಪರಮಾನಂದವಾಯಿತು. ಶ್ರೀ ಲಕ್ಷ್ಮೀಮನೋಹರತೀರ್ಥ ಶ್ರೀಪಾದಂಗಳವರ ಚರಣಾರವಿಂದಗಳಲ್ಲಿ ಶ್ರೀ ಮಾಧವತೀರ್ಥರು ಭಕ್ತಿಪುರಸ್ಸರವಾಗಿ ತಮ್ಮ ಅನಂತಾನಂತ ಪ್ರಣಾಮಗಳನ್ನು ಸಮರ್ಪಿಸಿದರು. ಇಷ್ಟಾದ ಮೇಲೆ, ಗುರುಗಳಾದ ಶ್ರೀ ಲಕ್ಷ್ಮೀಮನೋಹರತೀರ್ಥ ಶ್ರೀಪಾದಂಗಳವರ ಜೊತೆ ಶ್ರೀ ಕೃಷ್ಣನ ಸನ್ನಿಧಾನದಲ್ಲಿ ಕೆಲವು ದಿನಗಳ ಕಾಲ ಕಳೆದು, ಮುಂದಿನ ಭಗವತ್ಸೇವಾ ಕಾರ್ಯವು ಬಹಳವಿದ್ದುದರಿಂದ ಗುರುಗಳ ಅಪ್ಪಣೆ ಪಡೆದು, ಎಲ್ಲ ಅಷ್ಟ ಮಠಗಳ ಯತಿವರೇಣ್ಯರ ಆಶೀರ್ವಾದ ಪಡೆದು, ತಮ್ಮ ಪರಿವಾರದೊಂದಿಗೆ ಸಕಲ ವೈಭವದಿಂದ ಶ್ರೀ ಮಾಧವತೀರ್ಥರು ಸುರಪುರಕ್ಕೆ ಪ್ರಯಾಣ ಬೆಳೆಸಿದರು.
ಸುರಪುರದ ಬ್ರಾಹ್ಮಣ ವೃಂದವು ಅಮಿತೋತ್ಸಾಹದಿಂದ ಅತ್ಯಂತ ವೈಭವೋಪೇತವಾಗಿ ಶ್ರೀ ಮಾಧವತೀರ್ಥರನ್ನು ಸ್ವಾಗತ ಮಾಡಿತು. ಅನೇಕ ಭಕ್ತರು ಗುರುಗಳ ಪಾದಪೂಜೆ, ಭಿಕ್ಷೆಯನ್ನು ನೇರವೆರಿಸಿ ಧನ್ಯರಾದರು. ನಿತ್ಯವೂ ಶ್ರೀ ವಿಠ್ಠಲಕೃಷ್ಣನ ಪೂಜೆ, ಪಾಠ, ಪ್ರವಚನಾದಿಗಳು ನಡೆದವು. ಹೀಗೆಯೇ, ಮಧ್ವ ತತ್ವ ಪ್ರಚಾರ ಮಾಡುತ್ತ ದಿನಗಳುಇ ಕಳೆದಂತೆ ಇತರ ಅನೇಕ ಜನರು ಇವರ ಪ್ರಭಾವಕ್ಕೆ ಮನಸೋತು, ಇವರ ಶಿಷ್ಯತ್ವವನ್ನು ವಹಿಸಿದರು.
ಸುರಪುರದ ರಾಜಾವೆಂಕಟಪ್ಪ ನಾಯಕನಂತೂ ಶ್ರೀ ಮಾಧವತೀರ್ಥರ ಆಗಮನದಿಂದ ತನ್ನ ಸಂಸ್ಥಾನವೇ ಪಾವನವಾಯಿತು ಎಂದು ಭಾವಿಸಿ, ಶ್ರೀಗಳವರಿಗೆ ಬಹಳೇ ಮರ್ಯಾದೆ ಮಾಡಿದನು. ಭಕ್ತಿಪುರಸ್ಸರವಾಗಿ ಶ್ರೀಪಾದಂಗಳವರ ಪಾದಪೂಜೆ ಸಮಾರಂಭವನ್ನು ವೈಭವದಿಂದ ಜರುಗಿಸಿದರು. ಇದೇ ಸಮಯಕ್ಕೆ "ರಾಮಪುರ" ಎಂಬ ಗ್ರಾಮವನ್ನು ದಾನಪತ್ರ ಬರೆದು ಶ್ರೀಗಳವರಿಗೆ ಅರ್ಪಿಸಿದನು. ಇದಕ್ಕೆ ಪ್ರತಿಯಾಗಿ ಶ್ರೀಗಳವರು " ರಾಜನೇ, ನಾವು ಸಂನ್ಯಾಸಿಗಳು, ಇದ್ಯಾವುದು ನಮಗೆ ಬೇಕಿಲ್ಲ. ಜಗತ್ಕಲ್ಯಾಣಕಾರಣನಾದ ಶ್ರೀ ವಿಠ್ಠಲಕೃಷ್ಣ ದೇವರು ನಿನ್ನ ರಾಜ್ಯದಲ್ಲಿ ಜಗದುದ್ಧಾರಕ್ಕಾಗಿ ಬಂದು ನೆಲೆಸಿರುವನು. ಇತನ ದರ್ಶನಕ್ಕಾಗಿ ಕಣ್ವ ಮಠಕ್ಕೆ ಆಗಮಿಸುವ ಅನೇಕ ಭಗವದ್ಭಕ್ತರ ಆತಿಥ್ಯದಲ್ಲಿ ವೆಚ್ಚ ಮಾಡುವವನಾಗು. ಅಂದರೆ ನಿನಗೆ ಕಲ್ಯಾಣವಾಗುವುದು." ಎಂದು ಅಪ್ಪಣೆ ಮಾಡಿದರು. ರಾಜನು ಭಕ್ತ್ಯಾತಿಶಯದಿಂದ ಗುರುವಾಜ್ಞೆಯನ್ನು ಶಿರಸಾ ವಹಿಸಿ, ಕಣ್ವ ಮಠದ ಸೇವೆಯಲ್ಲಿ ತೊಡಗಿದನು.
ಮುಂದೆ ಶ್ರೀಗಳವರು ಮಧ್ವಮತದ ಪ್ರಚಾರಕ್ಕೋಸ್ಕರ ಆದವಾನಿ, ಅನಂತಪುರದ ಮಾರ್ಗವಾಗಿ ಬೆಂಗಳೂರು, ಕೋಲಾರ, ಚಿಂತಾಮಣಿ ಮುಂತಾದ ಕಡೆ ಪ್ರಯಾಣ ಬೆಳೆಸಿದರು. ಎಲ್ಲ ಕಡೆ ತಮ್ಮ ವಿದ್ವತ್ಪೂರ್ಣ ಪಾಂಡಿತ್ಯದಿಂದ ಪ್ರಾಸಾದಿಕ ವಾಣಿಯಿಂದ ಪಾಠ ಪ್ರವಚನ ಮಾಡುತ್ತ ವಿಷ್ಣು ಸರ್ವೋತ್ತಮತ್ವವನ್ನು ಪ್ರತಿಪಾದಿಸುತ್ತ, ಮಧ್ವ ಸಿದ್ಧಾಂತದ ತತ್ವ ರಹಸ್ಯಗಳನ್ನು ಬೋಧಿಸಿದರು. ತಮ್ಮ ಪ್ರವಚನಗಳಿಂದ ಎಲ್ಲ ಜನರನ್ನೂ ಉದ್ಧಾರ ಮಾಡಿದರು.
ಅದವಾನಿಯಲ್ಲಿ ಶ್ರೀಗಳವರಿಗೆ ಪೂರ್ವಾಶ್ರಮದಲ್ಲಿ ವಿದ್ಯಾಗುರುಗಳಾಗಿದ್ದ ವೇದಶಾಸ್ತ್ರ ಸಂಪನ್ನರಾದ ಶ್ರೀ ಜೋಯಿಸ ಧರ್ಮಭಟ್ಟರೆಂಬುವರು ಮೋಕ್ಷಾರ್ಥಿಕವಾಗಿ ಸಂನ್ಯಾಸದೀಕ್ಷೆಯನ್ನು ಸ್ವೀಕರಿಸುವ ತಮ್ಮ ಬಲವಾದ ಇಚ್ಛೆಯನ್ನು ವ್ಯಕ್ತಪಡಿಸಿದರು. ಅವರ ಇಚ್ಛೆಯಂತೆ ಶ್ರೀಗಳವರು "ವಾಮನತೀರ್ಥ"ರೆಂಬ ನಾಮಾಭಿದಾನದಿಂದ ವಿದ್ಯುಕ್ತವಾಗಿ ಸಂನ್ಯಾಸದೀಕ್ಷೆಯನ್ನು ಕೊಟ್ಟು ಅನುಗ್ರಹಿಸಿದರು. ವಾಮನತೀರ್ಥರು ಮುಂದೆ ಆಗಮ್ಯ ಮಹಿಮರಾಗಿ ಮೆರೆದರು.
ಶ್ರೀ ಮಾಧವತೀರ್ಥ ಶ್ರೀಪಾದಂಗಳವರು ಆದವಾನಿಯಿಂದ ಅನಂತಪುರಕ್ಕೆ ಆಗಮಿಸಿದರು. ಅನಂತಪುರದ ಕಲೆಕ್ಟರರಾದ ಮಿ||ಮಂಡ್ರೋಲ್ ಸಾಹೇಬರು ಶ್ರೀ ಮಾಧವತೀರ್ಥರ ದಿವ್ಯ ತೇಜಸ್ಸು, ಪ್ರತಿಭಗಳನ್ನು ಕಂಡು, ಕಣ್ವ ಮಠದ ಗುರುಪರಂಪರೆಯ ಇತಿಹಾಸವನ್ನು ತಿಳಿದು ಮಹಾತ್ಮರಾದ ಇವರನ್ನು ಸಕಲ ಮರ್ಯಾದೆಗಳೊಂದಿಗೆ ಬೀಳ್ಕೊಟ್ಟರು. ಶ್ರೀ ವಿಠ್ಠಲಕೃಷ್ಣದೇವರ ಅನುಗ್ರಹಬಲದಿಂದ, ಗುರುಗಳಾದ ಲಕ್ಷ್ಮೀಮನೋಹರತೀರ್ಥರ ಹಾಗೂ ಉಡುಪಿಯ ಅಷ್ಟ ಮಠದ ಯತಿಗಳ ಆಶೀರ್ವಾದ ಬಲದಿಂದ ಕಣ್ವ ಮಠವು ಸಕಲ ಮರ್ಯಾದೆಗಳಿಂದ ಅಭಿವೃದ್ಧಿಯನ್ನು ಹೊಂದತೊಡಗಿತು. ದಿನಗಳು ಕಳೆದಂತೆ ಅನಂತಪುರದಲ್ಲಿರುವಾಗ ಶ್ರೀ ಮಾಧವತೀರ್ಥರ ಆರೋಗ್ಯವು ವಿಷಮಿಸಿತು. ವೃಂದಾವನಸ್ಥರಾಗುವ ಕಾಲ ಪ್ರಾಪ್ತವಾಯಿತೆಂದು ತಮ್ಮ ದೃಷ್ಟಿಯಿಂದ ತಿಳಿದು, ತಮ್ಮ ಮುಂದಿನ ದೀರ್ಘ ಪ್ರಯಾಣವನ್ನು ಮೊಟಕುಗೊಳಿಸಿ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಬುದ್ಧಿನ್ನಿ ಗ್ರಾಮದ ಕಡೆಗೆ ತಮ್ಮ ಪ್ರಯಾಣವನ್ನು ಬೆಳೆಸಿದರು.
ಬುದ್ಧಿನ್ನಿಗೆ ಆಗಮಿಸಿದ ಶ್ರೀಗಳವರನ್ನು ಅಲ್ಲಿಯ ಭಕ್ತ ವೃಂದ ಸಕಲ ವೈಭವದೊಂದಿಗೆ ಹಾರ್ದಿಕ ಸ್ವಾಗತ ಮಾಡಿತು. ಶ್ರೀಗಳವರ ಪೂಜೆ, ಭಿಕ್ಷೆ ಮುಗಿದ ನಂತರ ಭಕ್ತರೆಲ್ಲರೂ ಶ್ರೀ ವಿಠ್ಠಲಕೃಷ್ಣನ ತೀರ್ಥಪ್ರಸಾದ ಸ್ವೀಕರಿಸಿ, ಸಂತೋಷರಾದರು. ತದನಂತರ ಶ್ರೀಗಳವರು ಶಿಷ್ಯ ಮಂಡಲಿಯನ್ನು ಕರೆದು ಭಗವತ್ಪ್ರೇರಣಾನುಸಾರವಾಗಿ ನಾವು ಇಲ್ಲಿಯೇ ಬೃಂದಾವನಸ್ಥರಾಗುವುದಾಗಿ ಸಂಕಲ್ಪಿಸಿರುವೆವು. ಅಲ್ಲಿಯ ತನಕ ಸಂಸ್ಥಾನ ಪೂಜೆ ಇಲ್ಲಿಯೇ ನಡೆಯಬೇಕು ಎಂದು ಅಪ್ಪಣೆ ಮಾಡಿದರು. ಬುದ್ಧಿನ್ನಿಯ ದೇಸಾಯಿ ಮುಂತಾದ ಶಿಷ್ಯ ಮಂಡಳಿಗೆ ಗುರುಗಳ ನಿಕಟ ಸಾನಿಧ್ಯವೂ, ನಿತ್ಯ ಸೇವ ಭಾಗ್ಯವೂ ಒದಗಿಬಂತೆಂದು ಸಂತೋಷ ಉಂಟಾದರೂ ಅವರು ಬೃಂದಾವನಸ್ಥರಾಗುವ ವಿಷಯವನ್ನು ತಿಳಿದು ಚಿಂತಿತರಾದರು. ಹೀಗೆ ದಿನಗಳು ಕಳೆದಂತೆ ಮಠಕ್ಕೆ ಒಬ್ಬ ಶಿಷ್ಯನನ್ನು ಸ್ವೀಕರಿಸುವ ಕಾಲವು ಕ್ರಮಪ್ರಾಪ್ತವಾಗಿ ಬರಲು ಶಾ.ಶ.೧೭೩೨ (ಕ್ರಿ.ಶ.೧೮೧೦) ಶುಕ್ಲನಾಮ ಸಂವತ್ಸರದ ಚೈತ್ರ ಶುದ್ಧ ತೃತೀಯ ದಂದು "ಶ್ರೀ ಅಕ್ಷೋಭ್ಯತೀರ್ಥ"ರಿಗೆ ಸಂಸ್ಥಾನ ದೀಕ್ಷೆಯನ್ನಿತ್ತು ಮಠದ ಪೀಠವನ್ನು ಅವರಿಗೆ ವಹಿಸಿಕೊಟ್ಟು, " ಸಚ್ಛಿಷ್ಯರೇ, ನಾವು ಬೃಂದಾವನಸ್ಥರಾಗುವುದಕ್ಕಾಗಿ ನೀವೆಲ್ಲ ಚಿಂತಿಸದಿರಿ. ಶ್ರೀ ಆದಿಶೇಷನ ಅನುಗ್ರಹಬಲದಿಂದಲೂ, ಶ್ರೀ ವಿಠ್ಠಲಕೃಷ್ಣನ ಪ್ರಸಾದದಿಂದಲೂ ಬೃಂದಾವನದಲ್ಲಿ ನಮ್ಮ ತಪಸ್ಸತ್ವವನ್ನು ಭಕ್ತರ ಉದ್ಧಾರಕ್ಕಾಗಿ ಪ್ರತಿಷ್ಠೆ ಮಾಡಿರುವೆವು. ನಿಮ್ಮ ಭಕ್ತಿಯಂತೆ ನಿಶ್ಚಯವಾಗಿ ಫಲ ದೊರೆಯುವುದು" ಎಂದು ಅಭಯ ನೀಡಿ, ಮರುದಿನ ಅಂದರೆ ಶುಕ್ಲ ನಾಮ ಸಂವತ್ಸರ ಚೈತ್ರ ಶುದ್ಧ ಚತುರ್ಥಿಯ ಪುಣ್ಯದಿನ (ಕ್ರಿ.ಶ.೧೮೧೦) ಹರಿಪದವನ್ನು ಸೇರಿದರು. ಇವರ ಬೃಂದಾವನವು ಬುದ್ಧಿನ್ನಿಯಲ್ಲಿ ಇದ್ದು, ಪ್ರತಿವರ್ಷವು ಆರಾಧನಾ ಮಹೋತ್ಸವವು ಅತ್ಯಂತ ವೈಭವದಿಂದ ಜರುಗುವುವು.
ಶ್ರೀ ಮಾಧವತೀರ್ಥರು ಇಂದಿಗೂ ತಮ್ಮ ತಪಶ್ಶಕ್ತಿಯಿಂದ ಬಂದ ಭಕ್ತರ ಕಷ್ಟಗಳನ್ನು ಕಳೆಯುತ್ತ, ಅಭೀಷ್ಟವನ್ನು ಕೊಡುತ್ತ ಬಂದಿದ್ದಾರೆ.
ಶ್ರೀ ಮಾಧವತೀರ್ಥರು ೩ ಜನರಿಗೆ ಯತ್ಯಾಶ್ರಮವನ್ನು ಕೊಟ್ಟಿರುವರು. ಶ್ರೀ ಅಕ್ಷೋಭ್ಯತೀರ್ಥರು ಕಣ್ವ ಮಠದ ಪೀಠಾಧಿಪತ್ಯಕ್ಕಾಗಿ , ಶ್ರೀ ವಾಮನತೀರ್ಥರು ಹಾಗೂ ಶ್ರೀ ವಿಷ್ಣುಪ್ರಿಯತೀರ್ಥರು ಮೋಕ್ಷಾರ್ಥಕ್ಕಾಗಿ.